ವಿಧಾನಸೌಧದಲ್ಲಿ ಫೆ.27 ರಿಂದ ಮಾ.3 ರವರೆಗೆ ಪುಸ್ತಕ ಮೇಳ: ಸಾರ್ವಜನಿಕರಿಗೆ ಪ್ರವೇಶ ಉಚಿತ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ಬೆಂಗಳೂರಿನ ವಿಧಾನಸೌಧದಲ್ಲಿ ಫೆ.27 ರಿಂದ ಮಾ.3 ರವರೆಗೆ ಪುಸ್ತಕ ಮೇಳವನ್ನು ಆಯೋಜನೆ ಮಾಡಲಾಗಿದೆ. ನಾಲ್ಕು ದಿನಗಳ ಈ ಪುಸ್ತಕ ಮೇಳಕ್ಕೆ ಸಾರ್ವಜನಿಕರಿಗೆ ವಿಧಾನಸೌಧ ಪ್ರವೇಶಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ವಿಧಾನಸೌಧದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಪುಸ್ತಕಮೇಳ ಕುರಿತು ಮಾಹಿತಿ ನೀಡಿದರು. ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಧಾನ ಸೌಧದಲ್ಲಿ ಬೃಹತ್ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ. ಸಾಹಿತ್ಯಕ್ಕೆ ಕ್ಷೇತ್ರಕ್ಕೆ ಕೊಡುಗೆ ಕೊಡುವವರಲ್ಲಿ ಪ್ರಕಾಶಕರ ಪಾತ್ರವನ್ನು ಕಡೆಗಣಿಸುವಂತಿಲ್ಲ. ಪ್ರಕಾಶಕರಿಂದ ಸಾಹಿತ್ಯ ಜನರಿಗೆ ತಲುಪುತ್ತಿದೆ. ಆದ್ದರಿಂದ ಪುಸ್ತಕ ಪ್ರಕಾಶಕರನ್ನು ಗಮನದಲ್ಲಿಟ್ಟುಕೊಂಡು ಪುಸ್ತಕ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಫೆ.27ರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಸ್ತಕ ಮೇಳವನ್ನು ಉದ್ಘಾಟನೆ ಮಾಡಲಿದ್ದಾರೆ. ಸಚಿವರು, ಜನಪ್ರತಿನಿಧಿಗಳು ಹಾಗೂ ಸಾಹಿತಿಗಳು ಪುಸ್ತಕ ಮೇಳದಲ್ಲಿ ಭಾಗಿಯಾಗಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಮತ್ತು ಸಾಹಿತಿ ದಾಮೋದರ್ ಮೌಜು ಭಾಗಿಯಾಗುತ್ತಿದ್ದಾರೆ. ಈ ಪುಸ್ತಕ ಮೇಳ ಫೆ.27ರಿಂದ ಮಾ.3ರವರೆಗೆ ನಡೆಯಲಿದೆ. ಪ್ರತಿದಿನ ಸಂಜೆ 5 ಗಂಟೆಗೆ ಮನರಂಜನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ವಿವರಿಸಿದರು.
ಮಾ.2ರ ಭಾನುವಾರದಂದು ಖ್ಯಾತ ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲಾ ನೇತೃತ್ವದಲ್ಲಿ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಫೆ.28ರಂದು ಪುಸ್ತಕ ಬಿಡುಗಡೆಗೂ ಅವಕಾಶ ಇದೆ. ಹೊಸ ಪುಸ್ತಕ ಬಿಡುಗಡೆ ಮಾಡುವ ಎಲ್ಲರಿಗೂ ಸೇರಿ ಒಂದು ಮಳಿಗೆಯನ್ನು ಮೀಸಲಿಡಲಾಗಿದೆ. ಬ್ಯಾರಿ, ತುಳು, ಕೊಂಕಣಿ, ಕನ್ನಡ ಅಕಾಡೆಮಿಗೂ ಒಂದೊಂದು ಸ್ಟಾಲ್ ಅನ್ನು ಮೀಸಲಿರಿಸಲಾಗಿದೆ. ಪುಸ್ತಕ ಮೇಳಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಇರುತ್ತದೆ. ಆದರೆ, ಪುಸ್ತಕ ಮೇಳದ ಕೊನೆಯ ದಿನ ಮಾ.3ರಂದು ಅಧಿವೇಶನ ಇರುವ ಕಾರಣ ಭದ್ರತೆಯ ಕಾರಣದಿಂದಾಗಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಹೇಳಿದರು.