Oplus_131072

ಯಾದಗಿರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ರೈತರ ಪರ ನಿಲ್ಲಲಿ, ಕಲ್ಯಾಣ ಭಾಗದ ರೈತರಿಗೆ ಮಲತಾಯಿ ಧೋರಣೆ: ಮಾಜಿ ಸಚಿವ ರಾಜುಗೌಡ ಆರೋಪ

ನಾಗಾವಿ ಎಕ್ಸಪ್ರೆಸ್ 

ಯಾದಗಿರಿ: ಹೈಕೋರ್ಟ್ ಕಲಬುರಗಿ ಪೀಠ ನಾರಾಯಣಪುರ ಜಲಾಶಯದಿಂದ ಕಾಲುವೆಗೆ‌ ನೀರು ಹರಿಸುವಂತೆ ಆದೇಶ ನೀಡಿದರೂ ರಾಜ್ಯ ಸರ್ಕಾರ ಈ ಆದೇಶದ ಬಗ್ಗೆ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತಂದಿದೆ ಎಂದು ಮಾಜಿ ಸಚಿವ ನರಸಿಂಹ ನಾಯಕ್ (ರಾಜುಗೌಡ) ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದು ಮೂರು ಟಿಎಂಸಿ ನೀರು ಹರಿಸುವಂತೆ ಪತ್ರ ಬರೆದಿರುವುದು ಕೇವಲ ನಾಟಕ ಮಾತ್ರ. ತೆಲಂಗಾಣಕ್ಕೆ ಜಲಾಶಯದಿಂದ ನೀರು ಹರಿಸಲು ಕಾಳಜಿ ವಹಿಸಿದ ರಾಜ್ಯ ಸರ್ಕಾರ ವಿಶೇಷವಾಗಿ ನಾರಾಯಣಪುರ ಜಲಾಶಯ ವ್ಯಾಪ್ತಿಯ ರೈತರ ಬಗ್ಗೆ ಯಾಕಿಷ್ಟು ಮತ್ಸರ ತೋರುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾದಗಿರಿ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳ ಬಗ್ಗೆ ಸರ್ಕಾರ ಸಂಪೂರ್ಣ ಮಲತಾಯಿ ಧೋರಣೆ ತೋರುತ್ತಿದೆ ಎಂಬುದು ಈ ತಡೆಯಾಜ್ಞೆ ತರುವ ಮೂಲಕ‌ ಸಾಬೀತು ಪಡಿಸಿದೆ. ಈ ಹೋರಾಟ ಕೇವಲ ರಾಜುಗೌಡನಿಗಲ್ಲ. ನಾನು ಸೇರಿದಂತೆ ಕನ್ನಡಪರ, ರೈತ ಸಂಘಟನೆಗಳು ಹೋರಾಟ ನಡೆಸಿದ್ದೇವೆ. ಯಾದಗಿರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರೂ ಈ ಸರ್ಕಾರಕ್ಕೆ ರೈತರ ಗೋಳು ಕೇಳಿಸುತ್ತಿಲ್ಲ ಎಂದು ಕಿಡಿ ಕಾರಿದರು.

ಯಾದಗಿರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ತಡೆಯಾಜ್ಞೆ ಬಗ್ಗೆ ಚಕಾರ ಎತ್ತುತ್ತಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀರಿಗಾಗಿ ಕೆಂಭಾವಿ ಸಮೀಪದ ಮುದನೂರಿನಲ್ಲಿ ಕಾಲುವೆ ಗೇಟ್ ಮುರಿದು ಹಾಕಿದ್ದಾರೆ ಎಂದರು.

ಸಿಎಂ ಸಿದ್ಧರಾಮಯ್ಯ ಬಗ್ಗೆ ನಮಗೆ ಗೌರವ ಇತ್ತು. ಆದರೆ, ಇಂದು ನಮ್ಮ ಭಾಗದ ರೈತರ ಬಗ್ಗೆ ನಿಷ್ಕಾಳಜಿ ವಹಿಸಿದ ಕಾರಣ ಅವರ ಮೇಲಿನ ಗೌರವ ಇಲ್ಲದಂತಾಗಿದೆ. ಕಾಲುವೆಗೆ ರೈತರಿಗೆ ನೀರು ಹರಿಸಿ ಎಂದು ನಾನು‌ ಮತ್ತೊಮ್ಮೆ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಮನವಿ ಮಾಡುತ್ತೇನೆ.‌ ದಯವಿಟ್ಟು ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ನಮ್ಮ ರೈತರಿಗೆ 4 ಟಿಎಂಸಿ ನೀರು ರೈತರಿಗೆ ಬಿಟ್ಟರೆ ಸಾಕು. ಡ್ಯಾಂನಲ್ಲಿ ನೀರು ಸಾಕಷ್ಟಿದೆ. ಆದರೆ, ಸಕ್ಕರೆ ಬೆಳೆಯಲು ನೀರು ಸಾಕಷ್ಟು ಬೇಕಾಗುತ್ತದೆ. ಹೀಗಾಗಿ ಆ ಭಾಗದಲ್ಲಿ ಜನಪ್ರತಿನಿಧಿಗಳು ಲಾಬಿ‌ ಮಾಡುತ್ತಿದ್ದಾರೆ ಎಂದು ಹೇಳಿದರು

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದ‌ ನೀರು ತರಕಾರಿ ಮಾರುಕಟ್ಟೆಯಾಗಿದೆ.‌ ಬಾಗಲಕೋಟ, ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳಿಗೆ ಡ್ಯಾಂನಿಂದ‌ ಪ್ರತ್ಯೇಕ ನೀರು ಬಿಡಿಸಿಕೊಳ್ಳುತ್ತಾರೆ. ಆದರೆ, ನಮ್ಮ ಜಿಲ್ಲೆಯ ಶಾಸಕರು ನೀರಿನ ವಿಷಯದಲ್ಲಿ ದುರ್ಬಲರಾಗಿದ್ದಾರೆ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ದೇವೇಂದ್ರನಾಥ ನಾದ್, ಬಿಜೆಪಿ ಜಿಲ್ಲಾ ವಕ್ತಾರ ಹಣಮಂತ ಇಟಗಿ, ಭೀಮು ನಾಯಕ, ಶಂಕರ ನಾಯಕ, ಭೀಮಣ್ಣ ಬೇವಿನಾಳ ಜಿಲ್ಲಾ ಮಾಧ್ಯಮ ಸಂಚಾಲಕ ವಿರೂಪಾಕ್ಷಯ್ಯ ಸ್ವಾಮಿ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಚಂದ್ರಶೇಖರ್ ಕಡೆಸೂರ್ ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!