ನರೇಂದ್ರ ಮೋದಿ ಅವರು ಸುದೀರ್ಘ ಅವಧಿಗೆ ಪ್ರಧಾನಿಯಾಗಿ ಹೊಸ ದಾಖಲೆ, ವಾಡಿಯಲ್ಲಿ ಬಿಜೆಪಿ ಮುಖಂಡರಿಂದ ಸಂಭ್ರಮ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಶ್ರೀ ಶಕ್ತಿ ಆಂಜನೇಯ ದೇವಸ್ಥಾನದಲ್ಲಿ ನರೇಂದ್ರ ಮೋದಿ ಅವರು ಸುದೀರ್ಘ ಅವಧಿಗೆ ಪ್ರಧಾನಿಯಾಗಿ ಹೊಸ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಮೋದಿ ಅವರ ಕಟೌಟಗೆ ಹಾಲಿನ ಅಭಿಷೇಕ ಮಾಡಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹತ್ವದ ರಾಜಕೀಯ ಮೈಲಿಗಲ್ಲೊಂದನ್ನು ತಲುಪಿದ್ದಾರೆ ಎಂದರು.
ನಿರಂತರವಾಗಿ 4,399 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಮೂಲಕ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಹಿಂದಿಕ್ಕಿ, ದೇಶದ ಅತಿ ದೀರ್ಘಾವಧಿ ನಿರಂತರ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿಯಾಗಿ ಹೊರಹೊಮ್ಮಿದ್ದಾರೆ ಇದರಿಂದ ಇಡೀ ದೇಶ ಸ್ವಾಭಿಮಾನದಿಂದ ಸಂತಸ ಪಡುತ್ತಿದೆ ಎಂದರು.
ಇವರ ನಾಯಕತ್ವಕ್ಕೆ ವಿಶ್ವದ ಬಹುತೇಕ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರುತ್ತಿದ್ದಾರೆ. ಇವರ ನಾಯಕತ್ವದಿಂದ ನಮ್ಮ ದೇಶಕ್ಕೆ ಹೊಸ ದಿಕ್ಕು, ಹೊಸ ಆವೇಗ ಮತ್ತು ಆತ್ಮ ವಿಶ್ವಾಸವನ್ನು ತುಂಬಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಿಂದ ಹಿಡಿದು 370 ನೇ ವಿಧಿ ರದ್ದುಗೊಳಿಸುವವರೆಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯದಿಂದ ವಿಶ್ವ ದರ್ಜೆಯ ಹೆದ್ದಾರಿ ಜಾಲದವರೆಗೆ, ಡಿಜಿಟಲ್ ಇಂಡಿಯಾದಿಂದ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನದವರೆಗೆ ಭಾರತವು ಪ್ರತಿಯೊಂದು ವಲಯದಲ್ಲೂ ಅಭೂತಪೂರ್ವ ಪರಿವರ್ತನೆಗೆ ಸಾಕ್ಷಿಯಾಗಿದೆ. ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಪ್ರಧಾನಿ ಮೋದಿಜಿ ಅವರು ರಾಷ್ಟ್ರಸೇವೆ ಅಜರಾಮರವಾಗಿದೆ ಎಂದು ಸ್ಮರಿಸಿದರು.
ತಮ್ಮ ಇಡೀ ಜೀವನವನ್ನೇ ರಾಷ್ಟ್ರಕ್ಕಾಗಿ ಸಮರ್ಪಿಸಿಕೊಂಡ ಮೋದಿಜಿಯವರ ಪ್ರತಿಯೊಂದು ಕಾರ್ಯವು ಯಶಸ್ವಿಯಾಗಲಿ ಅವರು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಶಕ್ತಿಯಿಂದ ದೇಶ ಸೇವೆಯನ್ನು ಮುಂದುವರಿಸಲಿ ಎಂದು ಆಂಜನೇಯನಲ್ಲಿ ಪ್ರಾರ್ಥಿಸಿ ಅವರಿಗೆ ಹೃತ್ಪೂರ್ವಕವಾಗಿ ಶುಭಾಶಯಗಳನ್ನು ಕೋರುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಕಿಶನ್ ಜಾಧವ, ಮಲ್ಲಿಕಾರ್ಜುನ ಸಾತಖೇಡ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ, ಉಮಾಭಾಯಿ ಗೌಳಿ, ವಿಶ್ವರಾಧ್ಯ ತಳವಾರ, ಜಿತೇಂದ್ರ ಚವ್ಹಾಣ, ಸುರೇಶ ನಾಯಕ, ಶಿವಲಿಂಗಯ್ಯ ಯಂಕಂಚಿ, ಮೌನೇಶ ವಿಶ್ವಕರ್ಮ, ಯುವರಾಜ ರಾಠೋಡ, ಗೋಪಾಲ ಜಾಧವ, ಲಖನ ಚವ್ಹಾಣ, ಬಾಲರಾಜ ಪಗಡೀಕರ್, ವಿಶ್ವನಾಥ ಕಲ್ಲಶೆಟ್ಟಿ ಸೇರಿದಂತೆ ಅನೇಕರು ಪಾಲ್ಗೊಂಡು ಮೋದಿ ಅವರ ಜಯ ಘೋಷ ಮೊಳಗಿಸಿದರು.
