ತೇಗಲತಿಪ್ಪಿ ಗ್ರಾಮದ ಎಲ್ಲಾ ಮನೆಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಗ್ರಾಮಸ್ಥರ ಒತ್ತಾಯ
ನಾಗಾವಿ ಎಕ್ಸಪ್ರೆಸ್
ಕಾಳಗಿ: ತಾಲೂಕಿನ ತೇಗಲತಿಪ್ಪಿ ಗ್ರಾಮದ ಕೆಲವು ಮನೆಗಳಿಗೆ ಇನ್ನೂ ಜೆಜೆಎಂ (ಜಲ್ ಜೀವನ್ ಮಿಷನ್) ಯೋಜನೆಯಡಿ ನೀರಿನ ಸಂಪರ್ಕ ಕಲ್ಪಿಸದೇ ಇರುವುದರಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ ಎಲ್ಲಾ ಮನೆಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಆಗುವಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಗ್ರಾಮದ ಕೆಲವು ನಳಗಳಿಗೆ ನೀರು ಸರಬರಾಜು ಆಗುತ್ತಿಲ್ಲ. ಈ ಕುರಿತು ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದು, ಇತ್ತೀಚೆಗೆ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೂ ಮನವಿ ಪತ್ರ ಸಲ್ಲಿಸಿ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರೂ ಸಮಸ್ಯೆಗೆ ಪರಿಹಾರ ದೊರಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮನವಿ ಸಲ್ಲಿಸಿ ಹಲವು ದಿನಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಕುಡಿಯುವ ನೀರಿಗಾಗಿ ಮಹಿಳೆಯರು ಮತ್ತು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಅಧಿಕಾರಿಗಳಿಗೆ ಕೇಳಿದರೆ ಹಾರಿಕೆ ಉತ್ತರ ಕೊಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಶೀಘ್ರವಾಗಿ ಪರಿಹಾರ ಮಾಡದಿದ್ದರೆ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

