ತೊಗರಿ ಮಿನಿಕಿಟ್ ಬಿತ್ತನೆ ಬೀಜಗಳ ವಿತರಣೆ | ಕೃಷಿ ಇಲಾಖೆಯ ಯೋಜನೆಗಳ ಸದುಪಯೋಗ ಮಾಡಿಕೊಳ್ಳಲು ದೊಡ್ಡಮನಿ ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ರೈತರು ಕೃಷಿ ಇಲಾಖೆಯ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸುನೀಲ್ ದೊಡ್ಡಮನಿ ಕರೆ ನೀಡಿದರು.
ತಾಲೂಕಿನ ಗುಂಡಗುರ್ತಿ ಹೊಬಳಿಯ ಗುಂಡಗುರ್ತಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ 2026-27 ನೇ ಸಾಲಿನ ದ್ವಿದಳ ದಾನ್ಯಗಳ ಆತ್ಮನಿರ್ಬರ ಪಲ್ಸ್ ಅಬಿಯಾನ ಯೋಜನೆ ಅಡಿಯಲ್ಲಿ ಉಚಿತವಾಗಿ ರೈತರಿಗೆ ತೊಗರಿ ಮಿನಿಕಿಟ್ ಬಿತ್ತನೆ ಬೀಜಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಹೀಗಾಗಿ ರೈತರು ಯೋಜನೆಗಳ ಲಾಭ ಪಡೆಯುವ ಮೂಲಕ ಅಭಿವೃದ್ಧಿ ಸಾಧಿಸಬೇಕು ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರೆ ಮಾತನಾಡಿ, ಈ ಯೋಜನೆಯು ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸುವುದು ಹಾಗ ರಾಜ್ಯವನ್ನು ಈ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ನಮ್ಮ ತಾಲೂಕಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಬಸವಾರಜ ಹೊಸಳ್ಳಿ, ಮಲ್ಲಿಕಾರ್ಜುನ, ಶ್ರೀನಿವಾಸ ನೆನಕ್ಕಿ, ಸುನಿಲ್ ಅಮ್ಮಗೋಳ, ಯೋಜನೆಯ ತಾಲೂಕು ನೋಡಲ್ ಆಧಿಕಾರಿ ಜುಲೈಕರ್ ಅಹಮದ್, ಕೃಷಿ ಅಧಿಕಾರಿಗಳಾದ ಅಬ್ದುಲ್ ಕರಿಂ, ಸುರಖಾ, ವಿಶ್ವರಾದ್ಯ, ಕಲ್ಯಾಣಿ, ವಿರುಪಾಕ್ಷಿ, ಬಸವರಾಜ, ಶರಣಮ್ಮ, ಕನ್ಯಾಕುಮಾರಿ, ಲಕ್ಷ್ಮಿ ಮತ್ತು ಗ್ರಾಮದ ರೈತರು ಉಪಸ್ಥಿತರಿದ್ದರು.

