ಚಿತ್ತಾಪುರದಲ್ಲಿ ಯುಜಿಡಿ ಆವಾಂತರ, ಗಮನ ಹರಿಸದ ಪುರಸಭೆ: ಸಜ್ಜನಶೆಟ್ಟಿ ಆರೋಪ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ನಾಗಾವಿ ರಸ್ತೆಯ ಒಂಟಿ ಕಮಾನ್ ಹತ್ತಿರ ಯುಜಿಡಿ ಆಳಗುಂಡಿ ತುಂಬಿ ಹರಿಯುತ್ತಿದ್ದು, ನಿತ್ಯ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಆರೋಪಿಸಿದ್ದಾರೆ.
ಸೋಮವಾರ ಅಮಾವಾಸ್ಯೆ ಇದ್ದ ಕಾರಣ ಪಟ್ಟಣದ ಜನರು ಸೇರಿದಂತೆ ಬೇರೆ ಬೇರೆ ಊರಿನ ಭಕ್ತಾದಿಗಳು ನಾಗಾವಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗುವವರು ದುರ್ನಾತದಿಂದ ಮಾನಸಿಕ ಹಿಂಸೆ ಅನುಭವಿಸಿದ್ದಾರೆ, ಎಲ್ಲರೂ ಮುಗು ಮುಚ್ಚಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿತ್ತು.
ಪಟ್ಟಣದ ಜನರಿಗೆ ವರವಾಗಬೇಕಿದ್ದ ಯುಜಿಡಿ ಈಗ ಶಾಪವಾಗಿ ಪರಿಣಮಿಸಿದೆ. ಈ ಸಮಸ್ಯೆ ಒಂದು ರಸ್ತೆಗೆ ಅಥವಾ ವಾರ್ಡ್ಗೆ ಸೀಮಿತವಾಗಿಲ್ಲ. ಒಳಚರಂಡಿ ಯೋಜನೆಯ ಪೈಪ್ಲೈನ್ ಯಾವೆಲ್ಲ ವಾರ್ಡ್ಗಳ ಮೂಲಕ ಹಾದುಹೋಗಿದೆಯೋ ಅಲ್ಲೆಲ್ಲಾ ಒಂದಿಲ್ಲೊಂದು ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ.
ಕಳೆದ 5 ದಿನಗಳಿಂದ ಯುಜಿಡಿ ಗುಂಡಿ ತುಂಬಿ ಹರಿಯುತ್ತಿರುವ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ದುರ್ವಾಸನೆ ಉಂಟಾಗಿದ್ದು ರಸ್ತೆ ಸಂಚಾರ ಕಷ್ಟಕರವಾಗಿದೆ, ವಾಹನ ಸವಾರರು ಪಾದಚಾರಿಗಳು ಮುಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈಗಲಾದರೂ ಪುರಸಭೆ ಅಧಿಕಾರಿಗಳು ಕೂಡಲೇ ಇದನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಜ್ಜನಶೆಟ್ಟಿ ಆಗ್ರಹಿಸಿದ್ದಾರೆ.

