ಶ್ರೀ ಫೌಂಡೇಶನ್ ಟ್ರಸ್ಟ್ ವತಿಯಿಂದ ಬೆನಕನಹಳ್ಳಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ | ಉತ್ತಮ ಆರೋಗ್ಯಕ್ಕೆ ಯೋಗಾಭ್ಯಾಸ ಅಗತ್ಯ: ರಮಣಗೌಡ
ನಾಗಾವಿ ಎಕ್ಸಪ್ರೆಸ್
ಸೇಡಂ: ನಿಯಮಿತ ಯೋಗಾಭ್ಯಾಸದಿಂದ ದೈಹಿಕ ಸದೃಢತೆ, ಮಾನಸಿಕ ನೆಮ್ಮದಿ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಶ್ರೀ ಫೌಂಡೇಶನ್ ಟ್ರಸ್ಟ್‌ನ ಸಿಎಸ್ಆರ್ ವಿಭಾಗದ ಮುಖ್ಯಸ್ಥ ರಮಣಗೌಡ ಹೇಳಿದರು.
ತಾಲೂಕಿನ ಬೆನಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಫೌಂಡೇಶನ್ ಟ್ರಸ್ಟ್‌ನ ಸಿಎಸ್ಆರ್ ಕಾರ್ಯಕ್ರಮದಡಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಯೋಗ ಜಾಗೃತಿ ಮತ್ತು ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗವು ಕೇವಲ ಒಂದು ವ್ಯಾಯಾಮವಲ್ಲ, ಅದು ಆರೋಗ್ಯಕರ ಮತ್ತು ಶಿಸ್ತುಬದ್ಧ ಜೀವನಕ್ಕೆ ಮಾರ್ಗದರ್ಶಕವಾಗಿದೆ ಎಂದು ತಿಳಿಸಿದರು.
ಆರೋಗ್ಯಕರ ಜೀವನವನ್ನು ನಡೆಸಿ ವೈದ್ಯರ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲು ಪ್ರತಿಯೊಬ್ಬರೂ ಯೋಗವನ್ನು ತಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಈ ವರ್ಷದ ಧ್ಯೇಯವಾಕ್ಯವಾದ “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಕುರಿತು ಅರಿವು ಮೂಡಿಸಲಾಯಿತು. ಯೋಗ ತರಬೇತುದಾರರಾದ ಅಶೋಕ ಉಮ್ರಾಣಿ ಹಾಗೂ ನಾಗಯ್ಯ ಕುಲಕರ್ಣಿ ಅವರು ಯೋಗದ ಮಹತ್ವ, ಆರೋಗ್ಯಕರ ಜೀವನಶೈಲಿಯಲ್ಲಿ ಯೋಗದ ಪಾತ್ರ ಹಾಗೂ ನಿಯಮಿತ ಯೋಗಾಭ್ಯಾಸದಿಂದಾಗುವ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಬಳಿಕ ವಿವಿಧ ಯೋಗಾಸನಗಳು, ಪ್ರಾಣಾಯಾಮ ಹಾಗೂ ಧ್ಯಾನ ವಿಧಾನಗಳನ್ನು ಪ್ರದರ್ಶಿಸಿ, ಭಾಗವಹಿಸಿದ ಎಲ್ಲರಿಂದ ಪ್ರಾಯೋಗಿಕವಾಗಿ ಅಭ್ಯಾಸ ಮಾಡಿಸಿದರು.
ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರೂ ಯೋಗವನ್ನು ತಮ್ಮ ನಿತ್ಯ ಜೀವನದ ಭಾಗವನ್ನಾಗಿ ಮಾಡಿಕೊಂಡು ಆರೋಗ್ಯಕರ ಹಾಗೂ ಸಮತೋಲನಯುತ ಜೀವನ ನಡೆಸುವ ಸಂಕಲ್ಪ ಕೈಗೊಂಡರು.
ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜವಾಹರ್ ಬಾಬು, ಆರೋಗ್ಯ ನಿರೀಕ್ಷಕಿ ನಿರ್ಮಲಾ ಗುಟ್ಟೇದಾರ್, ಶಿಕ್ಷಕ ರೇವಣಸಿದ್ದಪ್ಪ ಸೇರಿದಂತೆ ಗ್ರಾಮ ಮುಖಂಡರು ಉಪಸ್ಥಿತರಿದ್ದರು.

