ಖರ್ಗೆ ಕುಟುಂಬದಿಂದ ಕೋಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಕ್ಕಿದೆ: ಯಾಗಾಪೂರ ಅಭಿಮತ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮತಕ್ಷೇತ್ರದಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕೋಲಿ ಸಮಾಜಕ್ಕೆ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಸೂಕ್ತ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ ಹೇಳಿದರು.
ಪಟ್ಟಣದ ಅಂಬಿಗರ ಚೌಡಯ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ಕುಟುಂಬದಿಂದ ಕೋಲಿ ಸಮಾಜಕ್ಕೆ ಅನ್ಯಾಯವಾಗಿದೆ ಎಂಬ ಕೆಲವು ವ್ಯಕ್ತಿಗಳ ಆರೋಪ ಸತ್ಯಕ್ಕೆ ದೂರವಾಗಿದೆ. ಆರೋಪ ಮಾಡುವ ಮೊದಲು ನಮ್ಮ ಕೋಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಕ್ಕಿರುವ ಕುರಿತು ಅರಿತುಕೊಳ್ಳಬೇಕು ಎಂದು ಹೇಳಿದರು.
ನಮ್ಮ ಸಮಾಜದ ಬಹುದಿನಗಳ ಬೇಡಿಕೆಯಾಗಿದ್ದ ಅಂಬಿಗರ ಚೌಡಯ್ಯ ವೃತ್ತಕ್ಕೆ ಸ್ಥಳಾವಕಾಶ, ಸಮುದಾಯ ಭವನಕ್ಕೆ ಸ್ಥಳ ಹಾಗೂ ಅನುದಾನ, ಕೋಲಿ ಸಮಾಜದ ಹಿರಿಯರಾದ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಮೂರು ಬಾರಿ ವಿಧಾನ ಪರಿಷತ್ ಸ್ಥಾನ, ಹಾಗೂ ಇನ್ನೊಬ್ಬ ಮುಖಂಡರಾದ ಭೀಮಣ್ಣ ಸಾಲಿ ಅವರಿಗೆ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸ್ಥಾನ, ಕಳೆದ 17 ವರ್ಷಗಳಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಮತ್ತು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಹೀಗೆ ಅನೇಕ ಅವಕಾಶಗಳನ್ನು ಕಲ್ಪಿಸಿದ್ದಾರೆ. ಇನ್ನು ಹೆಚ್ಚಿನ ಅವಕಾಶಗಳನ್ನು ಒದಗಿಸುವ ಭರವಸೆಯನ್ನು ನೀಡಿದ್ದಾರೆ, ಅಂತಹ ನಾಯಕರ ವಿರುದ್ದ ಸುಳ್ಳು ಅರೋಪಗಳನ್ನು ಕೋಲಿ ಸಮಾಜದವರು ಯಾರೂ ಕೂಡಾ ಮಾಡಬಾರದು ಎಂದು ಮನವಿ ಮಾಡಿದರು.
ಅಂಬಿಗರ ಚೌಡಯ್ಯ ನಿಗಮದ ಮಾಜಿ ನಿರ್ದೇಶಕ ಶರಣಪ್ಪ ನಾಟೀಕಾರ ಹಾಗೂ ಯುವ ಕೋಲಿ ಸಮಾಜದ ಗೌರವಾಧ್ಯಕ್ಷ ಗುಂಡು ಐನಾಪುರ ಅವರು ಮಾತನಾಡಿ, ಮೂರನೇ ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಕೋಲಿ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೋಲಿ ಸಮಾಜದ ಮುಖಂಡರಾದ ಸಾಬಣ್ಣ ಡಿಗ್ಗಿ, ಮಲ್ಲಣ್ಣ ಮೋಸಿನ್, ಕಾಶಪ್ಪ ಡೋಣಗಾಂವ, ಸಾಬಣ್ಣ ಭರಾಟೆ, ಮಹಾದೇವ ಅಲ್ಲೂರ್, ಮಲ್ಲಿಕಾರ್ಜುನ ಅಲ್ಲೂರಕರ್, ಅಂಬು ಹೋಳಿಕಟ್ಟಿ, ದತ್ತಾತ್ರೇಯ ಬುಕ್ಕಾ, ಶರಣು ಅರಣಕಲ್, ಮಹೇಶ್ ಸಾತನೂರ, ರಾಜಶೇಖರ್ ಮೂಲಿಮನಿ, ಭೀಮು ಭಾಗೋಡಿ, ರಾಜಾಹುಲಿ, ಮಲ್ಲಿಕಾರ್ಜುನ ಮುಗುಳನಾಗಾಂವ, ಈರಣ್ಣ ಕೊಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
“ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅಂಬಿಗರ ಚೌಡಯ್ಯ ವೃತ್ತಕ್ಕೆ ಸ್ಥಳಾವಕಾಶ ಮಂಜೂರು ಮಾಡಿದ್ದಾರೆ ಹಾಗೂ ಕೋಲಿ ಸಮಾಜದ ಸಮುದಾಯ ಭವನಕ್ಕೆ ಸ್ಥಳ ಹಾಗೂ ಅನುದಾನ ನೀಡಿದ್ದಾರೆ ಹೀಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೋಲಿ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ”.-ಕಾಶಪ್ಪ ಡೋಣಗಾಂವ ಉಪಾಧ್ಯಕ್ಷರು ಕೋಲಿ ಸಮಾಜ ಚಿತ್ತಾಪುರ.

