ಸುಂಠಾಣ ಶಾಖಾ ಮಠದ ನೂತನ ಗುರುಭವನ ಲೋಕಾರ್ಪಣೆ ಹಾಗೂ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ಕಾರ್ಯಕ್ರಮಕ್ಕೆ ಚಾಲನೆ | ಪುರಾಣ ಆಲಿಕೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ: ಗಡಿಗೌಡಗಾಂವ ಶ್ರೀ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಇಂದಿನ ಆಧುನಿಕ ಬದುಕಿನಲ್ಲಿ ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸುತ್ತದೆ ಎಂದು ಗಡಿಗೌಡಗಾಂವ ಹಾವಗಿಲಿಂಗೇಶ್ವರ ಸಂಸ್ಥಾನ ಹಿರೇಮಠದ ಪೂಜ್ಯ ಡಾ. ಶಾಂತವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು.
ತಾಲೂಕಿನ ಸುಂಠಾಣ ಗ್ರಾಮದಲ್ಲಿ ಸುಗೂರು ಶ್ರೀ ಗುರು ರುದ್ರಮುನೀಶ್ವರ ಹಿರೇಮಠದ ಸುಂಠಾಣ ಶಾಖಾ ಮಠದ ನೂತನ ಗುರುಭವನ ಲೋಕಾರ್ಪಣೆ ಹಾಗೂ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ಉದ್ಘಾಟನೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರವಚನ ಹಾಗೂ ಪುರಾಣಗಳು ಮನುಷ್ಯನನ್ನು ಸನ್ಮಾರ್ಗದಲ್ಲಿ ಸಾಗಲು ನೆರವಾಗುತ್ತದೆ, ಮಠಮಾನ್ಯಗಳು ಪುರಾಣ ಪ್ರಚವಚನದಿಂದಲೇ ಜನರಲ್ಲಿ ಧಾರ್ಮಿಕತೆಯನ್ನು ಹೆಚ್ಚಿಸಿ ಸಂಸ್ಕೃತಿ, ಸಂಸ್ಕಾರ ಮತ್ತು ಸಂಪ್ರದಾಯವನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದರು.
ಚಂದನಕೇರಾದ ಪೂಜ್ಯ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಗುಂಡೇಪಲ್ಲಿ(ಕೆ) ಪೂಜ್ಯ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಉದ್ಯಮಿಗಳಾದ ಮಲ್ಲಿನಾಥ ಕೋಲಕುಂದಿ, ಮಲ್ಲಿಕಾರ್ಜುನ ಮರತೂರಕರ್ ಅವರು ಮಾತನಾಡಿದರು. ಸೂಗೂರು ಹಾಗೂ ಸುಂಠಾಣ ಮಠದ ಪೂಜ್ಯ ಡಾ. ಚನ್ನರುದ್ರಮುನಿ ಶಿವಾಚಾರ್ಯರು, ರಟಕಲನ ಪೂಜ್ಯ ನೀಲಕಂಠ ದೇವರು ಸಾನಿಧ್ಯ ವಹಿಸಿದ್ದರು.
ರೇವಗ್ಗಿ (ರಟಕಲ್) ನ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಿಂದ ಸುಂಠಾಣ ಶ್ರೀಮಠದ ವರೆಗೆ ಹಮ್ಮಿಕೊಂಡ ಜ್ಯೋತಿಯಾತ್ರೆ, ಕಾರ್, ಬೈಕ್ ರ್ಯಾಲಿಗೆ ಮಾಜಿ ಜಿ.ಪಂ ಸದಸ್ಯ ರಾಜೇಶ ಗುತ್ತೇದಾರ ಚಾಲನೆ ನೀಡಿದರು.
ಶ್ರೀಮಠದ ಭಕ್ತರಾದ ಶಿವಕುಮಾರ ಪೂಚಾಲಿ, ಭಾಗ್ಯಜ್ಯೋತಿ ಶಿವಕುಮಾರ, ಮಯೂರ ಹುಂಡೇಕರಿ ಅವರು, ಸೂಗೂರು(ಕೆ) ಪೂಜ್ಯ ಡಾ. ಚನ್ನರುದ್ರಮುನಿ ಶಿವಾಚಾರ್ಯರಿಗೆ ತುಲಾಭಾರ ಸೇವೆ ಸಲ್ಲಿಸಿದರು.
ಜ. 22 ರಂದು ಧ್ವನಿ ಸುರುಳಿ ಬಿಡುಗಡೆ: ಸುಗೂರು ಸಿರಿ ಶ್ರೀ ಚನ್ನಬಸವೇಶ್ವರ ಗುರುರುದ್ರಮುನೀಶ್ವರರ ಸುಪ್ರಭಾತ ಮತ್ತು ಭಕ್ತಿಗೀತೆಗಳು ಧ್ವನಿಸುರುಳಿ ಬಿಡುಗಡೆ ಸಮಾರಂಭ ನಡೆಯಲಿದೆ.
ಜಿ.ಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ, ಮುಖಂಡರಾದ ರೇವಣಸದ್ದಪ್ಪ ಮಾಸ್ತರ ಚಿಂಚೋಳಿ, ಬಸವರಾಜ ಪಾಟೀಲ್ ಹೇರೂರ್, ಸಂತೋಷ ಪಾಟೀಲ್ ಮಂಗಲಗಿ, ರೈತ ಸಂಘದ ಅಧ್ಯಕ್ಷ ವೀರಣ್ಣ ಗಂಗಾಣಿ, ಗ್ರಾ.ಪಂ ಅಧ್ಯಕ್ಷೆ ಗೀತಾ ಪ್ರೇಮಕುಮಾರ ಯಲಮಡಗಿ ಸೇರಿದಂತೆ ಸುಂರಾಣ ಹಾಗೂ ಸುತ್ತಲಿನ ಗ್ರಾಮದ ಭಕ್ತರು ಇದ್ದರು. ರಾಜಶೇಖರ ಪಾಟೀಲ್ ಸ್ವಾಗತಿಸಿದರು. ಜಗನ್ನಾಥ ಶೇರಿಕರ ನಿರೂಪಿಸಿ ವಂದಿಸಿದರು.

