Oplus_0

ಅಂಬೇಡ್ಕರ್ ನಿವಾಸ ಯೋಜನೆ ಅನುದಾನ ಬಿಡುಗಡೆಗೆ ಲಂಚ | ಕರದಾಳ ಗ್ರಾಪಂ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆಯಡಿ ಮಂಜೂರಾದ 3ನೇ ಹಾಗೂ 4ನೇ ಕಂತಿನ ಅನುದಾನ ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚಿತ್ತಾಪುರ ತಾಲೂಕಿನ ಕರದಾಳ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ (ಕರ ವಸೂಲಿಗಾರ) ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಸಂತೋಷ ರಾಠೋಡ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕರವಸೂಲಿಗಾರ. ಹಣಿಕೇರಾ ಗ್ರಾಮದ ರಾಮನಾಯಕ ತಾಂಡಾದ ನಿವಾಸಿ ಸಿಕಂದರ್ ಅವರು ಲೋಕಾಯುಕ್ತಕ್ಕೆ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು. ದೂರಿನ ಪ್ರಕಾರ ಸಿಕಂದರ್ ಅವರ ಅಕ್ಕ ಸವಿತಾ ಅವರಿಗೆ ಸರ್ಕಾರ ಮಂಜೂರು ಮಾಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆಯ 3ನೇ ಮತ್ತು 4ನೇ ಕಂತಿನ ಅನುದಾನ ಬಿಡುಗಡೆ ಮಾಡಲು ಆರೋಪಿತ ಸಂತೋಷ ರಾಠೋಡ ಅವರು 22 ಸಾವಿರ ಲಂಚ ಕೇಳಿದ್ದರು. ಇದರಲ್ಲಿ ಶುಕ್ರವಾರ 15 ಸಾವಿರ ರೂ. ಗಳನ್ನು ಫೋನ್‌ಪೇ ಮೂಲಕ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರು.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ದರಾಜು ಸಿ. ಅವರ ಮಾರ್ಗದರ್ಶನ, ಪೊಲೀಸ್ ಇನ್ಸ್‌ಪೆಕ್ಟರ್ ರಾಜಶೇಖರ ಬಡದೇಸಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

Spread the love

Leave a Reply

Your email address will not be published. Required fields are marked *

error: Content is protected !!