ತೆಗನೂರ ಪದವಿ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ | ಶಾಲಾ-ಕಾಲೇಜುಗಳಲ್ಲಿ ದೇಶದ ಭವಿಷ್ಯ ನಿರ್ಮಾಣ: ಸತ್ಯಂಪೇಟೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ದೇಶದ ಭವಿಷ್ಯ ನಿರ್ಮಾಣವಾಗುವುದು ಶಾಲಾ ಕಾಲೇಜುಗಳ ವರ್ಗಕೋಣೆ, ತರಬೇತಿ ಕಾರ್ಯಕ್ರಮಗಳಲ್ಲಿ ವಿನಃ ಕೇವಲ ಅಬ್ಬರದ ಮೆರವಣಿಗೆ ಇಲ್ಲವೇ ಘೋಷಣೆಗಳಲ್ಲಿ ಅಲ್ಲ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ನಗರದ ಎಸ್. ಎಸ್. ತೆಗನೂರ ಪದವಿಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾತ್ಮಗಾಂಧಿ, ಸುಭಾಶ್ಚಂದ್ರ ಬೋಸ್, ಜಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರ ರಾಣಿ ಚೆನ್ನಮ್ಮ, ಲಾಲ್, ಬಾಲ್, ಪಾಲ್ ಮುಂತಾದವರ ತ್ಯಾಗ, ಬಲಿದಾನದಿಂದ ಭಾರತ ಸ್ವತಂತ್ರ ದೇಶವಾಗಿದೆ ನಿಜ. ಆದರೆ ನಮ್ಮ ಕನಸುಗಳು ಈಡೇರಿದ್ದಾವೆಯೇ? ಎಂದು ಪ್ರಶ್ನಿಸಿದರು.
ಇಂದಿಗೂ ಸಹ ಹಲವು ಕಡೆಗಳಲ್ಲಿ ಅಸಮಾನತೆ, ಅಂಧಕಾರ, ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳು ಎದ್ದು ಕಾಣುತ್ತಿವೆ. ನಿರುದ್ಯೋಗ, ಭ್ರಷ್ಟಾಚಾರ ಮುಂತಾದ ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದು, ಸ್ವಾವಲಂಬಿ ಜೀವನ ನಡೆಸುವುದಕ್ಕಾಗಿ ದೇಶ ಸೇವೆ ಮಾಡುವುದು ಅಗತ್ಯವಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಜ್ಯೋತಿ ಆರ್. ತೆಗನೂರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಬೇಕು. ಅನ್ಯಾಯವನ್ನು ಖಂಡಿಸುವ, ಸತ್ಯವನ್ನು ಪ್ರತಿಪಾದಿಸುವ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಡಿಜಿಟಲ್ ಕ್ರೈಂ, ಮೋಸ, ವಂಚನೆ ಕುರಿತಾಗಿ ಆದಿತ್ಯಾ ಸ್ನೇಹಾ, ಸಹರಾ, ಅಂಜಲಿ, ವೀರನಗೌಡ, ಲಕ್ಷ್ಮೀಪುತ್ರ, ಶಿವಪುತ್ರ ಹಾಗೂ ಶ್ರೀಶೈಲ ಮುಂತಾದವರು ನಟಿಸಿದ ನಾಟಕ ಅದ್ಭುತವೆನಿಸಿತು. ಭಾರತದ ಇಂದಿನ ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿಯುವಂತಿತ್ತು. ಭವಿಷ್ಯದ ಪತ್ರಿಕೆಗಳಲ್ಲಿ ಸುದ್ದಿಗಳ ಆದ್ಯತೆ, ಎಐ ಅಬ್ಬರ, ಬದಲಾಗುವ ಗಾತ್ರ, ಸ್ವರೂಪ, ಡಿಜಿಟಲೀಕರಣ ಮುಂತಾದ ವಿಷಯಗಳನ್ನೊಳಗೊಂಡ ಪತ್ರಿಕಾ ರಚನಾ ಸ್ಪರ್ಧೆಯಲ್ಲಿ ರೋಹಿಣಿ ಮತ್ತು ಕೀರ್ತನಾ ಪ್ರಥಮ ಸ್ಥಾನ ಪಡೆದರು. ಸಂಸ್ಥೆಯ ಅಧ್ಯಕ್ಷ ರವೀಂದ್ರ ತೆಗನೂರ ವೇದಿಕೆಯಲ್ಲಿದ್ದರು. ಶ್ವೇತಾ ಮತ್ತು ಫಿಲೋಮಿನಾ ನಿರೂಪಿಸಿ ವಂದಿಸಿದರು.

