ಮುಂಗಾರು ಅಧಿವೇಶನದಲ್ಲಿ ಹಡಪದ ಸಮಾಜದ ಧ್ವನಿಯಾಗಿ ಮಾತನಾಡುವಂತೆ ಶಾಸಕ ಬಸವರಾಜ ಮತ್ತಿಮೂಡ್ ಅವರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: 2026ನೇ ಸಾಲಿನ ಮುಂಗಾರು ಅಧಿವೇಶನದಲ್ಲಿ ಹಡಪದ ಸಮಾಜದ ಧ್ವನಿಯಾಗಿ ಮಾತನಾಡಿ ಹಡಪದ ಸಮಾಜದ ಬೇಡಿಕೆಗಳ ಬಗ್ಗೆ ಪ್ರಸ್ತಾಪ ಮಾಡಬೇಕು ಎಂದು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ್ ಅವರಿಗೆ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ಹಡಪದ ಸಮಾಜಕ್ಕೆ ನೀಡುವ ಆಶ್ವಾಸನೆಗಳು ಬರೀ ಸುಳ್ಳಾಗದೆ, ಕೊಟ್ಟ ಮಾತು ತಪ್ಪದೆ, ಸಣ್ಣ ಸಣ್ಣ ಕಾಯಕ ಸಮಾಜಗಳಿಗೆ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ ₹100 ಕೋಟಿ ಅನುದಾನ ಮೀಸಲಿಡಬೇಕು, ಜಾತಿ ನಿಂದನೆಗೆ ಕಠಿಣ ಕಾನೂನು ಜಾರಿಗೆ ತಂದು, ಜಾತಿ ನಿಂದನೆ ಪ್ರಕರಣಗಳಿಗೆ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತಾಗಬೇಕು, ಬಸವಕಲ್ಯಾಣದಲ್ಲಿರುವ ಬಸವಣ್ಣನವರ ಅರಿವಿನ ಮನೆಯ ಗವಿಯ ಪಕ್ಕದಲ್ಲಿರುವ ನಿಜಸುಖಿ ಹಡಪದ ಅಪ್ಪಣ್ಣನವರ ಗವಿ (ಅರಿವಿನ ಮನೆ) ಬಿಕೆಡಿಬಿ ಯನ್ನು ಅಭಿವೃದ್ಧಿಪಡಿಸಬೇಕು, ನಿಜಸುಖಿ ಹಡಪದ ಅಪ್ಪಣ್ಣನವರ ಗವಿಯ ಸ್ಥಳದಲ್ಲಿ ಅನ್ಯ ಮೂರ್ತಿಯನ್ನು ರಾತ್ರೋರಾತ್ರಿ ಸ್ಥಾಪಿಸಿರುವ ಕುರಿತು ಸೂಕ್ತ ತನಿಖೆ ನಡೆಸಿ, ಬಸವಾದಿ ಕಾಯಕ ಶರಣರಾದ ನಿಜಸುಖಿ ಹಡಪದ ಅಪ್ಪಣ್ಣನವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು, ಸಣ್ಣ ಸಣ್ಣ ಕಾಯಕ ಶರಣರಿಗೆ ಅನ್ಯಾಯ ಮಾಡಬಾರದು. ಕಾಯಕ ಶರಣರ ಇತಿಹಾಸ, ಪರಂಪರೆ ಮತ್ತು ಸ್ಮಾರಕಗಳನ್ನು ಸಂರಕ್ಷಿಸಿ ಗೌರವಿಸಬೇಕು.
ಈ ಎಲ್ಲ ಬೇಡಿಕೆಗಳನ್ನು ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸಿ, ಹಡಪದ ಸಮಾಜದ ಪರವಾಗಿ ಧ್ವನಿಯಾಗಿ ಮಾತನಾಡಬೇಕು ಹಾಗೂ ಸಮಾಜದ ಅಭಿವೃದ್ಧಿ ನಿಗಮಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿ, ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಹಡಪದ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ, ಸುನೀಲ್ ಕುಮಾರ್ ಹಿಪ್ಪರರ್ಗಾ ಸೇರಿದಂತೆ ಸಮಾಜದ ಮುಖಂಡರು ಮನವಿ ಪತ್ರ ಸಲ್ಲಿಸಿದರು.

