ರಾಷ್ಟ್ರೀಯ ಕ್ರೀಡಾ ದಿನ | ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಜಗತ್ತಿನ ಕ್ರೀಡಾ ಕ್ಷೇತ್ರದ ಸಾಧಕ: ಸರಡಗಿ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಹಾಕಿ ಮಾಂತ್ರಿಕ ಎಂದೇ ಪ್ರಸಿದ್ದರಾದ ಮೇಜರ್ ಧ್ಯಾನ್ ಚಂದ್ ಕ್ರೀಡಾ ಕ್ಷೇತ್ರದ ಹೆಮ್ಮೆಯ ಸಾಧಕ ಎಂದು ದೈಹಿಕ ಶಿಕ್ಷಕ ಶಿವಕುಮಾರ್ ಸರಡಗಿ ಹೇಳಿದರು.
ತಾಲೂಕಿನ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಾಕಿ ಕ್ರೀಡೆಯಲ್ಲಿ ಭಾರತದ ಹೆಸರನ್ನು ಅಜರಾಮರಗೊಳಿಸಿದರು. ಸತತವಾಗಿ ಮೂರು ಒಲಂಪಿಕ್ಸ್ ನಲ್ಲಿ ಭಾರತದ ಹಾಕಿ ತಂಡ ಇವರ ನೇತೃತ್ವದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಇವರ ಆಟದಿಂದ ಪ್ರಭಾವಿತರಾದ ಅನೇಕರು ಅವರನ್ನು ಹಾಕಿ ಮಾಂತ್ರಿಕ ಎಂದು ಕರೆದರು ಎಂದು ಹೇಳಿದರು.
ಅವರ ಸಾಧನೆಯಿಂದ ಭಾರತೀಯ ಹಾಕಿಗೆ ಜಗತ್ತಿನಾದ್ಯoತ ಗೌರವ ದೊರೆಯಿತು. ಧ್ಯಾನ್ ಚಂದ್ ಅವರ ಬದುಕು ಕೇವಲ ಪದಕಗಳು ಮತ್ತು ದಾಖಲೆಗೆ ಮಾತ್ರ ಸೀಮಿತವಾಗಿರಲಿಲ್ಲ. ಅವರಲ್ಲಿ ಅಪಾರ ಶಿಸ್ತು, ಸರಳತೆ ಮತ್ತು ದೇಶಭಕ್ತಿ ಇತ್ತು. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಕ್ರೀಡೆಯನ್ನು ದೇಶಸೇವೆಯ ಒಂದು ಮಾರ್ಗವೆಂದು ಪರಿಗಣಿಸಿದ್ದರು ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಈಶ್ವರ ಬಾಳಿ, ವಿಭಾಗದ ಪ್ರಮುಖರಾದ ವಿದ್ಯಾಧರ ಖಂಡಳ, ಗಂಗಪ್ಪ ಕಟ್ಟಿಮನಿ, ವಿಜಯಲಕ್ಷ್ಮಿ ಬಮ್ಮನಳ್ಳಿ, ಕಾವೇರಿ ಮಡಿವಾಳ, ದೈಹಿಕ ಶಿಕ್ಷಕರಾದ ರೋಹಿತ ರಾವೂರಕರ್, ಶ್ಯಾಮರಾಯ ದೊಡ್ಡಮನಿ, ಶರಣು ಸಜ್ಜನ್, ಪಾರ್ವತಿ ದೊಡ್ಡಮನಿ ಸೇರಿದಂತೆ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು. ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು.

