ನವದೆಹಲಿಯಲ್ಲಿ ಹಾರಕೂಡ ಶ್ರೀಗಳ ಜನ್ಮ ದಿನೋತ್ಸವ ಆಚರಣೆ ಪೂರ್ವಭಾವಿ ಸಭೆ | ಶ್ರೀಗಳಿಗೆ ಅಧಿಕೃತ ಆಮಂತ್ರಿಸಿದ ಉಮೇಶ್ ಜಾಧವ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಹಾರಕೂಡ ಮಠದ ಶ್ರೀ ಡಾ. ಚೆನ್ನವೀರ ಶಿವಾಚಾರ್ಯರ 64ನೇ ಜನ್ಮದಿನೋತ್ಸವವನ್ನು ಈ ಬಾರಿ ನವೆಂಬರ್ 21ರಂದು ನವದೆಹಲಿಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲಾಗುವುದು ಎಂದು ಮಾಜಿ ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್ ತಿಳಿಸಿದರು.
ಹಾರಕೂಡ ಮಠದಲ್ಲಿ ಭಾನುವಾರ ಪೀಠಾಧಿಪತಿ ಡಾ. ಚನ್ನವೀರ ಶಿವಾಚಾರ್ಯರ ಸಮ್ಮುಖದಲ್ಲಿ ಪೂರ್ವ ಭಾವಿ ಸಿದ್ಧತೆ ಕುರಿತಾಗಿ ಚರ್ಚಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನವೆಂಬರ್ 21 ರಂದು ಬೆಳಿಗ್ಗೆ 11 ಗಂಟೆಗೆ ನವದೆಹಲಿಯ ಜನಪಥ್ ರಸ್ತೆಯಲ್ಲಿರುವ ಡಾ. ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಹಾರಕೂಡದ ಶ್ರೀ ಡಾ. ಚನ್ನವೀರ ಶಿವಾಚಾರ್ಯರ 64ನೇ ಜನ್ಮದಿನೋತ್ಸವವನ್ನು ಶ್ರೀಮಠದ ಭಕ್ತರು, ಪೂಜ್ಯರು ಮತ್ತು ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಈಗಾಗಲೇ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಷ್ಟ್ರದ ರಾಜಧಾನಿಯಲ್ಲಿ ಶ್ರೀಗಳೊಬ್ಬರ ಜನ್ಮದಿನಾಚರಣೆ ಆಚರಿಸುತ್ತಿರುವ ಈ ವಿಶೇಷ ಕಾರ್ಯಕ್ರಮವು ಹಾರಕೂಡ ಮಠದ ತ್ರಿವಿಧ ದಾಸೋಹ ಹಾಗೂ ಸಾಮಾಜಿಕ ಸಾಮರಸ್ಯದ ದಿವ್ಯ ಸಂದೇಶ ಬಿತ್ತಲು ಉತ್ತಮ ವೇದಿಕೆಯಾಗಿದೆ. ನವದೆಹಲಿಯಲ್ಲಿ ಆಯೋಜಿಸುವ ಕಾರ್ಯಕ್ರಮಕ್ಕೆ ಪೂಜ್ಯರು ಈಗಾಗಲೇ ಒಪ್ಪಿಗೆ ನೀಡಿದ್ದು ಮಠದ ಅಭಿಮಾನಿಗಳು ಮತ್ತು ಭಕ್ತರ ಜೊತೆ ಚರ್ಚೆಗಾಗಿ ಆಗಮಿಸಿ ಎಲ್ಲ ರೀತಿಯ ಸಲಹೆ ಸೂಚನೆ ಪಡೆದಿರುದಾಗಿ ಡಾ. ಉಮೇಶ್ ಜಾಧವ್ ತಿಳಿಸಿದರು.
ಶ್ರೀಗಳಿಗೆ ಅಧಿಕೃತ ಆಮಂತ್ರಣ:
ಹಾರಕೂಡ ಶ್ರೀ ಮಠದಲ್ಲಿ ಪೂಜ್ಯ ಶ್ರೀಗಳನ್ನು ಸತ್ಕರಿಸಿ ಅವರ ಆಶೀರ್ವಾದ ಪಡೆದು ಅಧಿಕೃತ ಆಮಂತ್ರಣ ನೀಡಿ ಗೌರವಿಸಲಾಯಿತು.
