ಭೂಸಂತ್ರಸ್ತರ ಬೇಡಿಕೆ ಈಡೇರಿಸದ ಗುಲ್ಬರ್ಗ ಸಿಮೆಂಟ್ ಕಂಪನಿ ವಿರುದ್ಧ ಆಕ್ರೋಶ | ಬಾಕಿ 4 ಲಕ್ಷ ರೂ. ಪರಿಹಾರ ಹಾಗೂ ಸ್ಥಳೀಯ ಯುವಕರಿಗೆ ಉದ್ಯೋಗ ನೀಡಲು ಆಗ್ರಹ

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ಗುಲ್ಬರ್ಗ ಸಿಮೆಂಟ್ ಲಿಮಿಟೆಡ್ ಕಂಪನಿ (ಹೈಡೆಲ್ಬರ್ಗ್ ಗ್ರೂಪ್) ಸ್ಥಾಪನೆಗಾಗಿ 2011ರಲ್ಲಿ 1,821 ಎಕರೆ ಭೂಮಿಯನ್ನು ಒಪ್ಪಂದದ ಮೂಲಕ ಪಡೆದುಕೊಂಡಿದ್ದು, 2013ರಲ್ಲಿ ಭೂಮಿಯನ್ನು ಖರೀದಿಸಲಾಗಿದೆ. ಪ್ರತಿ ಎಕರೆಗೆ 16 ಲಕ್ಷ ರೂ. ದರ ನಿಗದಿಪಡಿಸಿದ್ದರೂ, ಕೇವಲ 12 ಲಕ್ಷ ರೂ.ಗಳಿಗೆ ಭೂಮಿ ಖರೀದಿಸುವ ಮೂಲಕ ಭೂಮಾಲೀಕರಿಗೆ ಅನ್ಯಾಯ ಮಾಡಲಾಗಿದೆ ಎಂದು ಶರಣಬಸಪ್ಪ ಮಮಶೆಟ್ಟಿ ಆರೋಪಿಸಿದರು.

ಕಿರಣಗಿ, ಫಿರೋಜಾಬಾದ್ ಹಾಗೂ ಸೋಮವಾಥಹಳ್ಳಿ ಗ್ರಾಮದ ಭೂಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕೆಐಎಡಿಬಿ ನಿಗದಿಪಡಿಸಿದ ದರವನ್ನು ಉಲ್ಲಂಘಿಸಲಾಗಿದೆ. ಭೂಮಿ ಕಳೆದುಕೊಂಡ ಕುಟುಂಬಗಳ ಮಕ್ಕಳಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರೂ ಇದುವರೆಗೆ ಉದ್ಯೋಗದ ಖಾತ್ರಿ ಕಲ್ಪಿಸಿಲ್ಲ. ಆದ್ದರಿಂದ ಭೂಸಂತ್ರಸ್ತರಿಗೆ ಬಾಕಿ ಉಳಿದಿರುವ ಪ್ರತಿ ಎಕರೆಗೆ 4 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಭೂಮಿ ಕಳೆದುಕೊಂಡ ಕುಟುಂಬದ ಅರ್ಹ ಸದಸ್ಯರಿಗೆ ಉದ್ಯೋಗ ಒದಗಿಸುವ ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಕಂಪನಿ ಆರಂಭವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವ ಬದಲು ನೆರೆಯ ರಾಜ್ಯಗಳ ಕಾರ್ಮಿಕರನ್ನು ಕರೆತಂದು ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತಿದೆ. ಇದರಿಂದ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಅನ್ಯಾಯವಾಗುತ್ತಿದೆ. ಅಲ್ಲದೆ, ಕಂಪನಿಯು ಸಿಎಸ್ಆರ್ ನಿಧಿಯನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ಸುತ್ತಮುತ್ತಲಿನ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಕಾರ್ಯಕ್ಕೂ ಮುಂದಾಗದೆ ಗ್ರಾಮಗಳ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಂಪನಿಯು ಸಂಬಂಧಿತ ಕಾನೂನು ಮತ್ತು ನಿಯಮಗಳನ್ನು ಪಾಲಿಸದೆ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು, ಭೂಮಿ ಕಳೆದುಕೊಂಡ ರೈತರಿಗೆ ನೀಡಬೇಕಾದ ನ್ಯಾಯಯುತ ಪರಿಹಾರ ಹಾಗೂ ಉದ್ಯೋಗದ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಳಂಬ ಮಾಡುತ್ತಿರುವುದು ಖಂಡನೀಯವಾಗಿದೆ ಎಂದರು.

ಭೂಸಂತ್ರಸ್ತರ ಸಮಸ್ಯೆಗಳನ್ನು ಸರ್ಕಾರ ಮತ್ತು ಕಂಪನಿ ಆಡಳಿತ ಗಂಭೀರವಾಗಿ ಪರಿಗಣಿಸಬೇಕು. ಬಾಕಿ ಪರಿಹಾರ ಪಾವತಿ, ಸ್ಥಳೀಯ ಯುವಕರಿಗೆ ಉದ್ಯೋಗ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸರ್ಕಾರ ಹಾಗೂ ಕಂಪನಿ ಆಡಳಿತಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ದಲಿತ ಸೇನೆಯ ಕಾರ್ಯದರ್ಶಿ ಪುನೀತ್ ಹಳ್ಳಿ ಹಾಗೂ ಮಹ್ಮದ್ ಮಸ್ತಾನ್ ಮಾತನಾಡಿ, ಭೂಸಂತ್ರಸ್ತರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಮತ್ತು ಕಂಪನಿ ಆಡಳಿತ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಉಪವಾಸ ಸತ್ಯಾಗ್ರಹದಲ್ಲಿ ಬಿಜೆಪಿ ಹಾಗೂ ಕೋಲಿ ಸಮಾಜದ ಮುಖಂಡ ತಿಪ್ಪಣರೆಡ್ಡಿ, ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಚಾರ ಸಮಿತಿ ಸದಸ್ಯ ವಸಂತ ಕಾಂಬಳೆ, ದಲಿತ ಸೇನೆಯ ಅಧ್ಯಕ್ಷ ಭೀಮಶಂಕರ ಕಾಂಬಳೆ, ಜಟ್ಟೆಪ್ಪ ಪೂಜಾರಿ, ಶರಣಪ್ಪ ಬೂಸಾ, ಭೀಮಶಂಕರ ಸರಡಗಿ, ಶಂಕರ ಗೊಬ್ಬುರ, ಈರಣ್ಣ ಉಳ್ಳಾಗಡ್ಡಿ, ಸಿದ್ದಮ್ಮ ನರಿಬೋಳ, ಸುನಿಲ ದೊಡ್ಡಮನಿ, ಲಿಂಗರಾಜ ಕೋಣಿನ ಸೇರಿದಂತೆ ಹಲವು ಮುಖಂಡರು ಹಾಗೂ ಭೂಸಂತ್ರಸ್ತರು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!