ಸಾರಾಯಿ ಮಾರುವವರಿಗೆಲ್ಲಾ ಉತ್ತರ ಕೊಡಲ್ಲ ಎಂಬ ಶಾಸಕ ಬಿ.ಆರ್. ಪಾಟೀಲ್ ಹೇಳಿಕೆ ಖಂಡನೀಯ | ಈಡಿಗ ಸಮುದಾಯಕ್ಕೆ ಮಾಡಿದ ಅವಮಾನವನ್ನು ಸಹಿಸುವುದಿಲ್ಲ: ಸಂತೋಷ್ ಗುತ್ತೇದಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಆಳಂದ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ್ ಅವರು ಬಿಜೆಪಿ ನಾಯಕ ಹರ್ಷಾನಂದ ಗುತ್ತೇದಾರ ಅವರನ್ನು ಟೀಕಿಸುವ ಭರದಲ್ಲಿ ಸಾರಾಯಿ ಮಾರುವವರಿಗೆಲ್ಲಾ ನಾವು ಉತ್ತರ ಕೊಡಲ್ಲ ಎಂದು ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ ಹಾಗೂ ಆಕ್ಷೇಪಾರ್ಹವಾಗಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿ ಕಲಬುರಗಿ ಜಿಲ್ಲಾಧ್ಯಕ್ಷ ಸಂತೋಷ ಗುತ್ತೇದಾರ ವಾಡಿ ತಿಳಿಸಿದ್ದಾರೆ.
ಹರ್ಷಾನಂದ ಗುತ್ತೇದಾರ ಅವರು ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಅವರನ್ನು ಟೀಕಿಸುವ ನೆಪದಲ್ಲಿ ಬಳಸಿರುವ ಈ ಪದಪ್ರಯೋಗವು ಇಡೀ ಈಡಿಗ ಸಮುದಾಯದ ಕುಲಕಸುಬು, ಪರಂಪರೆ ಮತ್ತು ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತರುವಂತಿದೆ. ಈಡಿಗ ಸಮುದಾಯದ ಸಾಂಪ್ರದಾಯಿಕ ವೃತ್ತಿಯಾದ ಸೇಂದಿ ಮಾರಾಟವನ್ನು ಕೀಳಾಗಿ ಬಿಂಬಿಸುವ ಮೂಲಕ ಇಡೀ ಸಮುದಾಯವನ್ನು ಅವಮಾನಿಸುವ ಪ್ರಯತ್ನ ನಡೆದಿರುವುದು ನೋವಿನ ಸಂಗತಿ ಎಂದು ಹೇಳಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳು ಸಹಜ. ಒಬ್ಬ ರಾಜಕೀಯ ನಾಯಕನ ವಿರುದ್ಧ ಟೀಕೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ರಾಜಕೀಯ ಟೀಕೆಯ ಹೆಸರಿನಲ್ಲಿ ಒಂದು ಸಮುದಾಯದ ವೃತ್ತಿ, ಜಾತಿ ಮತ್ತು ಸಾಮಾಜಿಕ ಅಸ್ಮಿತೆಯನ್ನು ಗುರಿಯಾಗಿಸಿಕೊಂಡು ಅವಹೇಳನ ಮಾಡುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಜನಪ್ರತಿನಿಧಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಇಂತಹ ಹೇಳಿಕೆಗಳನ್ನು ನೀಡುವ ಮೊದಲು ತಮ್ಮ ಮಾತುಗಳ ಪರಿಣಾಮವನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಈಡಿಗ ಸಮುದಾಯವು ರಾಜ್ಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆ ನೀಡಿದೆ. ಶ್ರಮಜೀವಿ ಸಮುದಾಯದ ವೃತ್ತಿಯನ್ನು ಅವಮಾನಿಸುವುದು ಎಂದರೆ ಆ ಸಮುದಾಯದ ಶ್ರಮ ಮತ್ತು ಸ್ವಾಭಿಮಾನವನ್ನೇ ಅವಮಾನಿಸಿದಂತೆ. ಇಂತಹ ಹೇಳಿಕೆಗಳು ಸಮಾಜದಲ್ಲಿ ಜಾತಿ ಆಧಾರಿತ ತಾರತಮ್ಯ ಮತ್ತು ನೋವಿನ ಭಾವನೆಗಳಿಗೆ ಕಾರಣವಾಗುತ್ತವೆ.
ಆದ್ದರಿಂದ ಶಾಸಕ ಬಿ.ಆರ್. ಪಾಟೀಲ್ ಅವರು ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆದು, ಈಡಿಗ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸುತ್ತೇವೆ. ಸಾರ್ವಜನಿಕ ಜೀವನದಲ್ಲಿರುವವರು ಜಾತಿ ಮತ್ತು ವೃತ್ತಿಯ ಆಧಾರದಲ್ಲಿ ಯಾರನ್ನೂ ಕೀಳಾಗಿ ಕಾಣುವ ಮನೋಭಾವದಿಂದ ಹೊರಬರಬೇಕು. ಈಡಿಗ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತರುವ ಇಂತಹ ಹೇಳಿಕೆಗಳನ್ನು ನಮ್ಮ ಮಂಡಳಿ ತೀವ್ರವಾಗಿ ಖಂಡಿಸುತ್ತದೆ.
ಸಮಾಜದ ಯಾವುದೇ ಸಮುದಾಯದ ಗೌರವ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಅದರ ವಿರುದ್ಧ ಧ್ವನಿ ಎತ್ತುವುದು ನಮ್ಮ ಸಂಘದ ಜವಾಬ್ದಾರಿಯಾಗಿದೆ. ಈ ವಿಚಾರದಲ್ಲಿ ಈಡಿಗ ಸಮುದಾಯದ ಜನರು ಸ್ವಾಭಿಮಾನದಿಂದ ಒಗ್ಗಟ್ಟಾಗಿ ನಿಲ್ಲಬೇಕೆಂದು ಕರೆ ನೀಡಿದ್ದಾರೆ.

