ಪುರಾತತ್ವ ಇಲಾಖೆಯಿಂದ ತಾಲೂಕು ಮಟ್ಟದ ಪ್ರಾಚ್ಯಪ್ರಜ್ಞೆ ಕಾರ್ಯಕ್ರಮ | ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ : ರಾಜೇಂದ್ರ ಪ್ರಸಾದ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿದ್ಯಾರ್ಥಿಗಳು ಜೀವನದಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಾಲೂಕು ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಹೇಳಿದರು.
ಪಟ್ಟಣದ ಬಿಆರ್ ಸಿ ಕಚೇರಿಯಲ್ಲಿ ಪುರಾತತ್ವ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ಪ್ರಾಚ್ಯಪ್ರಜ್ಞೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಇತಿಹಾಸ, ಐತಿಹಾಸಿಕ ಸ್ಥಳಗಳು, ನಮ್ಮ ಭವ್ಯ ಪರಂಪರೆಯ ಕುರಿತು ವಿದ್ಯಾರ್ಥಿ ಜೀವನದಿಂದಲೇ ಅರಿವು ಮೂಡಿಸಲು ಇಂತಹ ಪ್ರಾಚ್ಯಪ್ರಜ್ಞೆ ಸ್ಪರ್ಧೆಗಳನ್ನು ಪುರಾತತ್ವ ಇಲಾಖೆಯ ವತಿಯಿಂದ ನಡೆಸಲಾಗುತ್ತಿದೆ ಎಂದರು.
ಇದು ಸ್ಪರ್ಧಾತ್ಮಕ ಯುಗ ಪ್ರತಿ ಹೆಜ್ಜೆ ಹೆಜ್ಜೆಗೂ ಸ್ಪರ್ಧೆಗಳು ಎದುರಾಗುತ್ತವೆ. ಆ ಸ್ಪರ್ಧೆಗಳನ್ನು ಎದುರಿಸಲು ಪ್ರತಿಯೊಬ್ಬರೂ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳುವುದರ ಮೂಲಕ ಜೀವನದಲ್ಲಿ ಉನ್ನತ ಸಾಧನೆಗಳನ್ನು ಮಾಡಬೇಕು ಎಂದು ಹೇಳಿದರು.
ಶಿಕ್ಷಣ ಸಂಯೋಜಕ ರವೀಂದ್ರ ಮಾಡವಾಳಕರ್ ಸ್ಪರ್ಧೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕಿನ ವಿವಿಧ ಶಾಲೆಗಳಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ರಸಪ್ರಶ್ನೆ, ಪ್ರಬಂಧ, ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ವೇದಿಕೆಯ ಮೇಲೆ ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗ ಬಾಳಿ, ಶಿಕ್ಷಕರಾದ ಸುರೇಶ್ ಓಂಕಾರ್, ಶಿವಪುತ್ರಪ್ಪ ಹಾಗಾರಗಿ, ಶ್ರೀದೇವಿ ಅರಕೇರಿ, ವಾಣಿಶ್ರೀ, ಸುಮಂಗಲ, ಭಾಗಿರತಿ ಉಪಸ್ಥಿತರಿದ್ದರು. ಸಿ ಆರ್ ಪಿ ಅಂಬಾದಾಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
