ಕರದಾಳ ಶಕ್ತಿ ಪೀಠದಲ್ಲಿ ದಿ.ಸುರೇಶ್ ಗುತ್ತೇದಾರ ನುಡಿ ನಮನ | ನಾರಾಯಣ ಗುರು ಶಕ್ತಿಪೀಠದ ಶಿಲ್ಪಿಯ ಕನಸು ಈಡೇರಿಸಲು ಯೋಜನೆ : ಡಾ ಪ್ರಣವಾನಂದ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಕರದಾಳ ಗ್ರಾಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಅಸ್ತಿತ್ವಕ್ಕೆ ಬರಲು ಕಾರಣಿಭೂತರಾದ ಶಿಲ್ಪಿ, ಸರ್ವ ಜನಾಂಗದ ಪ್ರೀತಿ ಗಳಿಸಿದ ಸಮಾಜ ಸೇವಕ ಕರದಾಳದ ಸುರೇಶ್ ಗುತ್ತೇದಾರ ಅವರಿಗೆ ಗುರುವಾರ ಭಾವಪೂರ್ಣ ನುಡಿನಮನ ಸಲ್ಲಿಸಲಾಯಿತು.
ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ನೇತೃತ್ವದಲ್ಲಿ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಮಠದ ಪೀಠಾಧಿಪತಿ ಡಾ. ಪ್ರಣವಾನಂದ ಮಹಾಸ್ವಾಮಿಗಳು ಮಾತನಾಡಿ, ನಮ್ಮನ್ನಗಲಿದ ಸುರೇಶ್ ಗುತ್ತೇದಾರ ಶಕ್ತಿ ಪೀಠ ಆರಂಭಿಸಿದ ಶಿಲ್ಪಿ. ಅವರ ಹೆಸರಿನಲ್ಲಿ ಶಕ್ತಿ ಪೀಠದಲ್ಲಿ ಎಲ್ಲಮ್ಮ ದೇವಿಯ ಗುಡಿಯ ನಿರ್ಮಾಣ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು. ಸುರೇಶ್ ಗುತ್ತೇದಾರ ಅವರ ಮೂರ್ತಿಯನ್ನು ಕೂಡ ಮಠದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಹೇಳಿದರು.
ಸಮಾಜದ ಶಕ್ತಿಯಾಗಿ ಬೆಳೆದ ಅವರ ಆದರ್ಶ ಮತ್ತು ಕನಸುಗಳನ್ನು ಎಲ್ಲರ ನೆರವಿನೊಂದಿಗೆ ಈಡೇರಿಸಲು ಪ್ರಯತ್ನಿಸಲಾಗುವುದು ಬೆಂಗಳೂರು ಸೇರಿದಂತೆ ಒಟ್ಟು 24 ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ನುಡಿನಮನ ಸಲ್ಲಿಸಿದ ಅವರು, ಸರ್ವಜಾತಿಯ ಜನರೊಂದಿಗೆ ಸಹೋದರನಂತೆ ಬೆಳೆದ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು. ಸಮಾಜ ಕಾರ್ಯದ ಜೀವನವನ್ನು ಮಾಡಿ ಬದುಕನ್ನು ಸಾರ್ಥಕ ಗೊಳಿಸಿದ ಸುರೇಶ್ ಅವರ ಬದುಕು ಎಲ್ಲರಿಗೂ ಮಾದರಿಯಾಗಲಿ ಎಂದರು.
ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರು ಹಾಗೂ ಶಕ್ತಿಪೀಠದ ಮಾಧ್ಯಮ ಸಂಚಾಲಕ ಡಾ. ಸದಾನಂದ ಪೆರ್ಲ ಅವರು ನುಡಿ ನಮನ ಸಲ್ಲಿಸಿ, ಕಲಬುರಗಿ ಜಿಲ್ಲೆಯಲ್ಲಿ ಶಕ್ತಿಪೀಠವನ್ನು ಆರಂಭಿಸಲು ರೂವಾರಿಯಾಗಿ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕರದಾಳ ಗ್ರಾಮಕ್ಕೆ ಖ್ಯಾತಿ ತಂದ ಸುರೇಶ್ ಗುತ್ತೇದಾರ ಸಮಾಜಕ್ಕಾಗಿ ಅರ್ಪಣಾ ಮನೋಭಾವದಿಂದ ದುಡಿದ ವ್ಯಕ್ತಿ. ನಾರಾಯಣ ಗುರುಗಳ ತತ್ವವನ್ನು ಜೀವನದಲ್ಲಿ ತತ್ವಷಃ ಅಳವಡಿಸಿ ಸಮಾಜದಲ್ಲಿ ದಾನ, ಧರ್ಮದ ಮೂಲಕ ಆದರ್ಶದ ಜೀವನ ಮಾಡಿದವರು. ಅವರ ಕನಸುಗಳನ್ನು ಈಡೇರಿಸಿದರೆ ನಿಜಾರ್ಥದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ. ಅದಕ್ಕಾಗಿ ಸಮಾಜವು ಕೈಜೋಡಿಸಬೇಕು ಎಂದರು.
ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿಪೀಠದ ನಿರ್ಮಾತೃ ಸುರೇಶ್ ಗುತ್ತೇದಾರ ಶಕ್ತಿಪೀಠಕ್ಕೆ ಕೇವಲ ಭೂದಾನಿಗಳು ಮಾತ್ರವಲ್ಲ ಅವರು ಶಕ್ತಿ ಪೀಠದ ಶಿಲ್ಪಿಗಳಾಗಿದ್ದು ಅವರ ಹೆಸರಿನಲ್ಲಿ ಚಿತ್ತಾಪುರ ಪಟ್ಟಣದಲ್ಲಿ ಯಾವುದಾದರೊಂದು ರಸ್ತೆಗೆ ನಾಮಕರಣ ಮಾಡಬೇಕು ಹಾಗೂ ರಾಷ್ಟ್ರ ಮತ್ತು ರಾಜ್ಯಮಟ್ಟದ ಎರಡು ಪ್ರಶಸ್ತಿಗಳನ್ನು ಪ್ರಾರಂಭಿಸುವ ಮೂಲಕ ನಿಜಾರ್ಥದಲ್ಲಿ ಅವರಿಗೆ ಶ್ರದ್ಧಾಂಜಲಿ ಸಂದಾಯವಾಗಬೇಕು ಎಂದರು.
ಚಿತ್ತಾಪುರ ಪುರಸಭೆ ಮಾಜಿ ಸದಸ್ಯ ಜಗದೀಶ್ ಚವ್ಹಾಣ ಮಾತನಾಡಿ, ಸರಳ ಸಜ್ಜನಿಕೆ ಮತ್ತು ನಗುಮುಖದಿಂದ ಸಮಾಜ ಸೇವೆ ಮಾಡಿ ಜನಾನುರಾಗಿದ್ದ ಸುರೇಶ್ ಗುತ್ತೇದಾರ ಅವರ ಅಗಲುವಿಕೆ ಕಲ್ಯಾಣ ಕರ್ನಾಟಕಕ್ಕೆ ದೊಡ್ಡ ನಷ್ಟ ಎಂದರು. ರಾಷ್ಟ್ರೀಯ ಈಡಿಗ ಮಂಡಳಿ ತಾಲೂಕು ಅಧ್ಯಕ್ಷ ಶ್ರೀಮಂತ ಗುತ್ತೇದಾರ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಎಲ್ಲರ ಅಭಿಮಾನಕ್ಕೆ ಹಾಗೂ ಪ್ರೀತಿಗೆ ಪಾತ್ರರಾದ ಸುರೇಶ್ ಗುತ್ತೇದಾರ ಅವರ ಅಂತಿಮ ಸಂಸ್ಕಾರಕ್ಕೆ ಆಗಮಿಸಿದ ಜನಸ್ತೋಮವೇ ಸಾಕ್ಷಿ ಎಂದರು.
ನಿವೃತ್ತ ಶಿಕ್ಷಕರಾದ ದೇವಪ್ಪ ನಂದೂರಕರ್ ಮಾತನಾಡಿ, ಸಮಾಜದ ಪ್ರೀತಿಯನ್ನು ಗಳಿಸಿ ಯಶಸ್ಸಿನ ಮೆಟ್ಟಿಲೇರಿ ಈಡಿಗ ಸಮುದಾಯಕ್ಕೆ ಕೀರ್ತಿ ತಂದ ಸುರೇಶ್ ಅವರ ಅಗಲುವಿಕೆ ಸಮಾಜಕ್ಕೆ ದೊಡ್ಡ ನಷ್ಟ ಎಂದರು.
ನುಡಿ ನಮನ ಕಾರ್ಯಕ್ರಮದಲ್ಲಿ ಶಕ್ತಿ ಪೀಠದ ಟ್ರಸ್ಟಿ ವೆಂಕಟೇಶ್ ಎಂ ಕಡೇಚೂರ್, ಕಾರ್ಯದರ್ಶಿ ವೆಂಕಟೇಶ್ ಗುಂಡಾನೂರು, ತಾಲೂಕು ಅಧ್ಯಕ್ಷ ನಾಗಯ್ಯ ಗುತ್ತೇದಾರ, ಸಮಾಜ ಮುಖಂಡರಾದ ರಾಜೇಶ್ ಗುತ್ತೇದಾರ, ಶಿವಯ್ಯ ಗುತ್ತೇದಾರ ಪೇಟಶಿರೂರು, ಸುನಿಲ್ ಗುತ್ತೇದಾರ ವಾಡಿ, ಸತೀಶ್ ವಡಿಗೇರಿ, ಅಶೋಕ್ ಭೀಮಳ್ಳಿ, ಮಹೇಶ್ ಗುತ್ತೇದಾರ್ ಹೊಳಕುಂದ, ಶಂಕರ್ ಲೀಡರ್, ರವಿ ಸೂಲಹಳ್ಳಿ, ಭೀಮಣ್ಣ ನಾಲವಾರ, ನರಸಯ್ಯ ಗುತ್ತೇದಾರ, ಅಶೋಕ ಭೀಮಳ್ಳಿ, ಪ್ರಭು ಹಲಕರ್ಟಿ, ಕರಣು ಅಲ್ಲೂರ, ಲಕ್ಷ್ಮೀಕಾಂತ್ ಬೆಳಗೇರಿ ಹಾಗೂ ಸುರೇಶ್ ಗುತ್ತೇದಾರ್ ಅವರ ಸಹೋದರಿ ವೀಣಾ ಪುಣೆ ನುಡಿ ನಮನಮನ ಸಲ್ಲಿಸಿದರು. ಧರ್ಮಪತ್ನಿ ಸೀಮಾ ಸುರೇಶ್ ಗುತ್ತೇದಾರ ಉಪಸ್ಥಿತರಿದ್ದರು. ಕಾಶಿನಾಥ ಗುತ್ತೇದಾರ ಸ್ವಾಗತಿಸಿ ನಿರೂಪಿಸಿದರು. ರಾಷ್ಟ್ರೀಯ ಈಡಿಗ ಮಹಾಮಂಡಳಿ ಕಲಬುರಗಿ ಜಿಲ್ಲಾಧ್ಯಕ್ಷ ಸಂತೋಷ್ ಗುತ್ತೇದಾರ ವಾಡಿ ವಂದಿಸಿದರು.
ನುಡಿ ನಮನ ಕಾರ್ಯಕ್ರಮದಲ್ಲಿ ಸುರೇಶ್ ಗುತ್ತೇದಾರ ಅವರ ಭಾವಚಿತ್ರಕ್ಕೆ ಸೇರಿದ ಗಣ್ಯರು ಹಾಗೂ ಅಭಿಮಾನಿಗಳು ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

