ಶಹಾಬಾದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷರೊಂದಿಗೆ ಸಂವಾದ 

ಕನ್ನಡ ಭಾಷೆ ಬಳಸಿದಾಗ ಮಾತ್ರ ಉಳಿಸಲು ಸಾಧ್ಯ: ತೀರ್ತೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಯಾವುದೇ ಭಾಷೆಯನ್ನು ನಿರಂತರವಾಗಿ ಬಳಸಿದಾಗ ಮಾತ್ರ ಉಳಿಸಲು ಮತ್ತು ಬೆಳೆಸಲು ಸಾಧ್ಯವೆಂದು ಶಹಾಬಾದ ತಾಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ, ಮಕ್ಕಳ ಸಾಹಿತಿ ಎಚ್. ಬಿ. ತೀರ್ತೆ ಅವರು ಹೇಳಿದರು.

ಅವರು ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸರ್ವಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಅದು ಕೇವಲ ಭಾಷೆಯಲ್ಲ ಅದು ನಮ್ಮ ಅಸ್ಮಿತೆ. ಕನ್ನಡವನ್ನು ದಿನನಿತ್ಯದ ವ್ಯವಹಾರದಲ್ಲಿ ಹೆಚ್ಚು ಹೆಚ್ಚು ಬಳಸಿದಷ್ಟು ಅದು ಬೆಳೆಯುತ್ತಾ ಹೋಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗನು ಸ್ವಾಭಿಮಾನಿಯಾಗಿ ಅನ್ಯ ರಾಜ್ಯ ಮತ್ತು ವಿದೇಶದ ಪ್ರಜೆಗಳಿಗೂ ಕನ್ನಡವನ್ನು ಕಲಿಸುವ ಪ್ರಯತ್ನಗಳನ್ನು ಮಾಡಬೇಕು. ನಮ್ಮ ಅತಿಯಾದ ಔದಾರ್ಯದಿಂದ ಕರ್ನಾಟಕದಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಿದೆ ಎಂದರು.

ಕರ್ನಾಟಕದಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ಭಾಷೆ ರಾರಾಜಿಸಬೇಕು. ಈ ವಿಷಯದಲ್ಲಿ ನಾವು ನಮ್ಮ ಅಕ್ಕ ಪಕ್ಕದವರನ್ನು ನೋಡಿ ಕಲಿಯಬೇಕಾಗಿದೆ. ಸುಮಾರು 2500 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಾಡು ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಪಡೆದ ರಾಜ್ಯವಾಗಿದೆ. ಇಂತಹ ನೆಲದ ಸಂಸ್ಕೃತಿಯನ್ನು ಗೌರವಿಸುವ. ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗನೂ ಮಾಡಬೇಕೆಂದು ಹೇಳಿದರು.

ಸಂವಾದದಲ್ಲಿ ವಿದ್ಯಾರ್ಥಿಗಳಾದ ತಾರಾಬಾಯಿ, ವರ್ಷಾ, ಶರಣು, ವೈಷ್ಣವಿ, ಶಿವಲಿಂಗ ಪ್ರಶ್ನೆಗಳನ್ನು ಕೇಳಿದರು. ಮಕ್ಕಳ ಎಲ್ಲಾ ಪ್ರಶ್ನೆಗಳಿಗೆ ನಿಯೋಜಿತ ಸರ್ವಾಧ್ಯಕ್ಷರು ಉತ್ತರ ನೀಡಿದರು.

ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಶಹಾಬಾದ ತಾಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ, ಮಕ್ಕಳ ಸಾಹಿತಿ ಎಚ್.ಬಿ ತೀರ್ತೆ ಅವರಿಗೆ ಸನ್ಮಾನಿಸಿ ಗೌರವಿಸಿದರು. ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಗುರು ವಿದ್ಯಾಧರ ಖಂಡಾಳ, ಶಿಕ್ಷಕ ಈಶ್ವರಗೌಡ ಪಾಟೀಲ್ ಇದ್ದರು. ಶಿಕ್ಷಕಿ ಭುವನೇಶ್ವರಿ ಎಂ. ನಿರೂಪಿಸಿ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!