ಸೇಡಂ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಸೇಡಂ: ಪಟ್ಟಣದಲ್ಲಿ ಡಿಸೆಂಬರ್ 2 ರಂದು ನಡೆಸಲು ನಿರ್ಧರಿಸಲಾದ ತಾಲೂಕು ಮಟ್ಟದ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷೆ ಸುಮಾ ಎಲ್. ಚಿಮ್ಮನಚೋಡಕರ್ ಅಧ್ಯಕ್ಷತೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ಕುರಿತು ಕರೆದ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಸೇಡಂನ ಪ್ರಸಿದ್ಧ ಸಾಹಿತಿಗಳಾದ ಲಿಂಗಾರೆಡ್ಡಿ ಶೇರಿ, ಧನಶೆಟ್ಟಿ ಸಕ್ರಿ, ಬನ್ನಪ್ಪ ಕುಂಬಾರ್, ಮಹಿಪಾಲ ರೆಡ್ಡಿ ಮುನ್ನೂರ ಹಾಗೂ ಜಗನ್ನಾಥ್ ತರನಳ್ಳಿ ರವರ ಹೆಸರುಗಳು ಪ್ರಸ್ತಾಪವಾದವು, ಈ ಕುರಿತು ಸುದೀರ್ಘ ಚರ್ಚೆ ನಡೆಯಿತು. ಅಂತಿಮವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಕೃಷಿಗೈದು ಸುಮಾರು 20 ಕ್ಕೂ ಹೆಚ್ಚು ವಿಭಿನ್ನ ಕವನ ಸಂಕಲನ, ಕಥಾ ಸಂಕಲನ ರಚಿಸಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನ ಮೂಡಿಸಿರುವ ಲಿಂಗಾರೆಡ್ಡಿ ಶೇರಿ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕಸಾಪ ಅಧ್ಯಕ್ಷೆ ಸುಮಾ ಎಲ್. ಚಿಮ್ಮನಚೋಡಕರ, ಗೌರವ ಕಾರ್ಯದರ್ಶಿ ಪ್ರಕಾಶ್ ಗೊಣಗಿ, ರಮೇಶ್ ರಾಠೋಡ, ಡಾ.ಪಂಡಿತ್ ಬಿ.ಕೆ, ಸರ್ಕಾರಿ ನೌಕರ ಸಂಘದ ನೂತನ ಅಧ್ಯಕ್ಷ ಅರವಿಂದ್ ಪಸಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸಾಗರ್, ಕಸಾಪ ಪದಾಧಿಕಾರಿಗಳಾದ ಈರಮ್ಮ ಪಾಟೀಲ್ ಯಡ್ಡಳ್ಳಿ, ರಾಚಣ್ಣ ಬಳಗಾರ, ಸಂದೀಪ್ ಪಾಟೀಲ, ಜನಾರ್ಧನ್ ರೆಡ್ಡಿ ತುಳೇರ್, ನದೀಮ್ ಪಟೇಲ್, ಲಕ್ಷ್ಮಣ್ ರಂಜೋಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.