ವಾಡಿಯಲ್ಲಿ ಬಿ.ಎಸ್.ಯಡಿಯೂರಪ್ಪ ಜನ್ಮದಿನಾಚರಣೆ, ವಿಶೇಷ ಪೂಜೆ, ಕಟೌಟ್ ಗೆ ಕ್ಷೀರಾಭಿಷೇಕ, ಹಣ್ಣು ಹಂಪಲು ವಿತರಣೆ

ನಾಗಾವಿ ಎಕ್ಸಪ್ರೆಸ್

ವಾಡಿ: ಪಟ್ಟಣದ ಶ್ರೀ ಶಕ್ತಿ ಆಂಜನೇಯ ಮಂದಿರದಲ್ಲಿ ಮಾಜಿ ಮುಖ್ಯಮಂತ್ರಿ ಬಿಜೆಪಿ ವರಿಷ್ಠರಾದ ಬಿ.ಎಸ್.ಯಡಿಯೂರಪ್ಪ ಅವರ 82ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಮುಖಂಡರು ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಬಿಎಸ್ ವೈ ಕಟೌಟ್ ಗೆ ಕ್ಷೀರಾಭಿಷೇಕ ಮಾಡಿ, ಹಣ್ಣು ಹಂಚಿ ಸಂಭ್ರಮಿಸಿದರು.

ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರು 81 ವಸಂತಗಳನ್ನು ಪೂರೈಸಿ, 82ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಆಂಜನೇಯ ಸ್ವಾಮಿ ಇನ್ನು ಹೆಚ್ಚಿನ ಆಯಸ್ಸು, ಆರೋಗ್ಯವನ್ನು ನೀಡಲಿ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಅವರು ರಾಜ್ಯದಾದ್ಯಂತ ಪ್ರವಾಸ ಮಾಡುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.

ಯಡಿಯೂರಪ್ಪ ನವರು ಯಾವತ್ತೂ ಯಾವುದೇ ಸ್ಥಾನಮಾನ ನಿರೀಕ್ಷೆ ಮಾಡದ ಶ್ರೇಷ್ಠ ರಾಜಕಾರಣಿ. ಸಿಎಂ ಸ್ಥಾನಕ್ಕೆ ರಾಜೀನಾಮೆ ‌ಕೊಟ್ಟ ಬಳಿಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ಮಾಡುತ್ತಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿ ಬಲಿಷ್ಠವಾಗುವಂತೆ ಹೇಳುತ್ತಾರೆ. ಸಾವಿರಾರು ಕಾರ್ಯಕರ್ತರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತ ಕೆಲಸ ಮಾಡುವುದರ ಮೂಲಕ ಪ್ರತಿಯೊಬ್ಬ ಕಾರ್ಯಕರ್ತರ ಮನದಲ್ಲಿ ಯಡಿಯೂರಪ್ಪ ಇದ್ದಾರೆ ಎಂದರು.

ಮುಖಂಡ ರಾಜು ಮುಕ್ಕಣ್ಣ ಮಾತನಾಡಿ, 80ರ ದಶಕದಲ್ಲಿ ಭಾರತೀಯ ಜನಸಂಘ ಬಿಜೆಪಿ ಪಕ್ಷವಾಗಿ ರೂಪುಗೊಂಡಾಗ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಆಗಿನ್ನು ಗಟ್ಟಿ ನೆಲೆ ಇರಲಿಲ್ಲ. ಶಾಸಕ ಸಂಸದರಿರಲಿ ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಕಾರ್ಯಕರ್ತರೂ ಸಹ ಇಲ್ಲದ ಪರಿಸ್ಥಿತಿ ಇತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ಅದೇ ಪಕ್ಷ 2008ರ ವೇಳೆಗೆ ಕೇವಲ 3 ದಶಕಗಳ ಅಂತರದಲ್ಲಿ ರಾಜ್ಯದ ಚುಕ್ಕಾಣಿ ಹಿಡಿಯುವಷ್ಟರ ಮಟ್ಟಿಗೆ ಪಕ್ಷ ಬೆಳೆಯಿತು ಎಂದರೆ ಅದು ಸಾಮಾನ್ಯವಾದ ವಿಚಾರವಲ್ಲ. ಸರ್ವರಿಗೂ ಸಮಪಾಲು ಸಮಬಾಳಿನಂತೆ ರಾಜ್ಯದಲ್ಲಿ ಜನಪರ ಆಡಳಿತ ನಡೆಸಿದ ಧೀಮಂತ ನಾಯಕರು ಎಂದು ಬಣ್ಣಿಸಿದರು.

ಅಂದಿನಿಂದ ಇಂದಿನ ವರೆಗೆ ಬಿಜೆಪಿಯ ಇಂತಹ ಯಶಸ್ಸಿನ ಹಿಂದಿದ್ದ ಏಕೈಕ ಹೆಸರು ಎಂದರೆ ಬಿ.ಎಸ್. ಯಡಿಯೂರಪ್ಪ. ಆರ್.ಎಸ್.ಎಸ್ ಮೂಲಕ ಬಿಜೆಪಿ ಪ್ರವೇಶಿಸಿ 1983ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸಿ ವಿಧಾನಸೌಧ ಪ್ರವೇಶಿಸಿದ ಅವರು ನಂತರ ಹಿಂದೆ ತಿರುಗಿ ನೋಡೆ ಇಲ್ಲ ನಮ್ಮ ರಾಜಾಹುಲಿ ಎಂದು ಹೇಳಿದರು.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ನಮ್ಮೆಲ್ಲರಿಗೂ ಬಿ.ಎಸ್.ಯಡಿಯೂರಪ್ಪ‌ ಅವರು ಮಾಸ್‌ ಲೀಡರ್. ರಾಜ್ಯದಲ್ಲಿ ಬಿಜೆಪಿಯ ಈ ಮಟ್ಟಿಗೆ ಬೆಳೆಸಿ, ದಶಕಗಳಿಂದ ಏಕಮೇವ ನಾಯಕರಾಗಿ ಕಾಣಿಸಿಕೊಂಡವರು ನಮ್ಮ ಬಿ.ಎಸ್‌. ಯಡಿಯೂರಪ್ಪ ಅವರು. ರಾಜ್ಯದಲ್ಲಿ ಬಿಜೆಪಿ ಬಾವುಟ ಹಾರಿಸಿದ ಕೀರ್ತಿಗೆ ಭಾಜನರಾದವರಲ್ಲಿ ಇವರು ಪ್ರಥಮರಾಗಿದ್ದಾರೆ ಎಂದರು.

ಅದಕ್ಕಾಗಿ ರಾಜ್ಯದಲ್ಲಿ ಯಡಿಯೂರಪ್ಪ ಜನಮೆಚ್ಚುಗೆ ಪಡೆದ ನಾಯಕರಾದರು. ಹಲವು ಹೋರಾಟಗಳ ಮೂಲಕ ಅಧಿಕಾರಕ್ಕೆ ಬಂದರು. ಅಧಿಕಾರಕ್ಕೆ ಬಂದ ಮೇಲೆ‌ ಎಲ್ಲ ಸಮುದಾಯಗಳಿಗೆ ಭರವಸೆ ‌ಬದುಕು ಕೊಟ್ಟರು. ಕೆಳಸ್ತರದ, ಬಡವರಿಗೆ, ಮಹಿಳೆಯರು, ಮಕ್ಕಳಿಗೆ, ರೈತರಿಗೆ ಅನುಕೂಲವಾಗುವ ಯೋಜನೆ ಕೊಟ್ಟರು. ಜನ ಯಡಿಯೂರಪ್ಪ ಅವರ ಕಾರ್ಯಕ್ರಮಗಳನ್ನು ಈಗ ಮತ್ತೆ ಬಯಸುತ್ತಿದ್ದಾರೆ. ಇವತ್ತು ಕಾಂಗ್ರೆಸ್ ದುರಾಡಳಿತ ದೂರ ಮಾಡಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ಇಂದು ನಾವೆಲ್ಲರೂ ಮಾಡಬೇಕಾಗಿದೆ ಎಂದು ಹೇಳಿದರು.

ಮುಖಂಡರಾದ ಭೀಮಶಾ ಜೀರೊಳ್ಳಿ, ಶರಣಗೌಡ ಚಾಮನೂರ, ಭೀಮರಾವ ದೊರೆ, ಶಿವಶಂಕರ ಕಾಶೆಟ್ಟಿ, ಅರ್ಜುನ ಕಾಳೇಕರ್, ರಿಚರ್ಡ್ ಮಾರೆಡ್ಡಿ, ಬಸವರಾಜ ಕಿರಣಗಿ, ಮಲ್ಲಿಕಾರ್ಜುನ ಸಾತಖೇಡ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ, ಸಿದ್ರಾಮಪ್ಪ ಮಹಾಗಾಂವ, ಗುಂಡುಗೌಡ ಪಾಟೀಲ ಚಾಮನೂರ, ನಾಗರಾಜ ಕಮರವಾಡಿ, ಕಾಳಪ್ಪ ಸೂಲಹಳ್ಳಿ, ಬಸವರಾಜ ಪಗಡಿಕರ್, ಚಂದ್ರಾಮ ಚವ್ಹಾಣ, ಶರಣು ಕಾಚಾಪುರ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!