ವಾಡಿ ಮಕ್ಕಳ ಸಂಕಷ್ಟಕ್ಕೆ ಮಿಡಿದ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರಿಂದ ಭಾರಿ ಮೆಚ್ಚುಗೆ
ನಾಗಾವಿ ಎಕ್ಸಪ್ರೆಸ್
ವಾಡಿ: ತಂದೆ ತಾಯಿಯನ್ನು ಕಳೆದುಕೊಂಡ ಪುಟ್ಟ ಮಕ್ಕಳಿಬ್ಬರು ತಮ್ಮ ಪ್ರೀತಿಯ ಪೋಷಕರ ನೆನಪಲ್ಲೇ ಕಾಲ ಕಳೆಯುತ್ತಿದ್ದು, ಹೆತ್ತವರ ಆಸರೆಯಿಲ್ಲದೇ ಬದುಕಿಗೊಂದು ನೆಲೆ ಇಲ್ಲದೇ ಪರದಾಡುತ್ತಿದ್ದಾರೆ. ಹೌದು ಇಂತಹ ಮನ ಕಲಕುವ ಪರಿಸ್ಥಿತಿ ಎಲ್ಲಂತಿರಾ..
ಕಲಬುರ್ಗಿ ಜಿಲ್ಲೆಯ ಚಿತ್ಣತಾಪುರ ತಾಲೂಕಿನ ವಾಡಿ ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನ ಬಡಾವಣೆಯ 10 ವರ್ಷದ ಭಾಗ್ಯಶ್ರೀ ಹಾಗೂ 9 ವರ್ಷದ ಆಕಾಶ ಎಂಬ ಪುಟ್ಟ ಮಕ್ಕಳೇ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥರಾಗಿದ್ದು ಬಡತನದ ಬವಣೆಯಲ್ಲಿ ಬೆಂದು ಹೋಗುತ್ತಿದ್ದಾರೆ.
ತಂದೆ ಗೋಪಾಲ ಕಾಶಿ 5 ವರ್ಷದ ಹಿಂದೆ ಕ್ಷಯರೋಗದಿಂದ ಮೃತಪಟ್ಟರೆ, ತಾಯಿ ರೇಣುಕಾ ಬಡತನದ ನಡುವೆ ಸೂಕ್ತ ವೈದ್ಯಕೀಯ ಚಿಕಿತ್ಸೆಯಿಲ್ಲದೆ 2 ವರ್ಷದ ಹಿಂದೆ ನಿಧನರಾಗಿದ್ದಾರೆ. ಅನಾಥರಾಗಿದ್ದ ಮಕ್ಕಳನ್ನು ತನ್ನ ಜತೆ ಇಟ್ಟುಕೊಂಡಿದ್ದ ಅಜ್ಜಿ ಸರಸ್ವತಿ 9 ತಿಂಗಳ ಹಿಂದೆ ತೀರಿಕೊಂಡಿದ್ದು ಮಕ್ಕಳು ಈಗ ಸೋದರಮಾವನ ಆಸರೆಯಲ್ಲಿದ್ದಾರೆ. ಅಸಹಾಯಕ ಪುಟಾಣಿಗಳ ಸಂಕಷ್ಟವು ನೋಡುಗರ ಮನಕಲಕುತ್ತಿದೆ.
ಒಡಲ ಸಂಕಷ್ಟ ಆಲಿಸಿ ಸಾಂತ್ವನ ಹೇಳಬೇಕಿದ್ದ ಹೆತ್ತವರೇ ಇಲ್ಲವಾಗಿದ್ದು ಮಕ್ಕಳು ಪ್ರತಿದಿನ ಪೋಷಕರ ಕನವರಿಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಕೈತುತ್ತು ಉಣ್ಣಿಸುತ್ತಾ ಪ್ರೀತಿ ಧಾರೆ ಎರೆಯುವ ಹೆತ್ತವರ ಮಡಿಲಲ್ಲಿ ಬೆಳೆಯಬೇಕಿದ್ದ ಮಕ್ಕಳು ಅನಾಥಪ್ರಜ್ಞೆಯ ಕಹಿನೆನಪಿನೊಂದಿಗೆ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ. ತಾಯಿ ನೆನಪು ಬಂದು ತಮ್ಮ ಬಿಕ್ಕಿ ಬಿಕ್ಕಿ ಅತ್ತರೆ ಅಮ್ಮ ಹೊರಗಡೆ ಹೋಗಿದ್ದಾಳೆ ಬರುತ್ತಾಳೆ ಸುಮ್ಮನಿರು ಎಂದು ಭಾಗ್ಯಶ್ರೀ ರಮಿಸುತ್ತಾಳೆ. ಇದು ಸ್ಥಳೀಯರ ಕಣ್ಣಾಲಿಗಳು ತೇವಗೊಳ್ಳುವಂತೆ ಮಾಡುತ್ತಿವೆ. ವಾಸಕ್ಕೆ ಸ್ವಂತ ಮನೆ ಹಾಗೂ ಹಿಡಿಯಷ್ಟು ಜಮೀನು ಇಲ್ಲದ ಪುಟಾಣಿಗಳು ಈಗ ಬಡತನವನ್ನೇ ಹಾಸುಹೊದ್ದುಕೊಂಡಿರುವ ಸೋದರ ಮಾವ ರಾಜು ಕಲುಕುಟಿಗಿ ಅವರ ಮನೆಯಲ್ಲಿ ತಾತ್ಕಾಲಿಕ ಆಸರೆ ಪಡೆದಿದ್ದು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ.
ತಾಯಿಯ ಅಂತ್ಯಸಂಸ್ಕಾರಕ್ಕೆಂದು ಸ್ಥಳೀಯ ಪುರಸಭೆಯಿಂದ ಕಾಡಿಬೇಡಿ ಪಡೆದ ₹5000 ಸಹಾಯಧನ ಬಿಟ್ಟರೆ ಬೇರೆ ಯಾವ ಸರ್ಕಾರಿ ಸೌಲಭ್ಯಗಳು ಮಕ್ಕಳಿಗೆ ದೊರಕಿಲ್ಲ ಎನ್ನುವುದೇ ವಿಪರ್ಯಾಸವಾಗಿದೆ.
ಅನಾಥ ಮಕ್ಕಳಾದ ಭಾಗ್ಯಶ್ರೀ ಮತ್ತು ಆಕಾಶನಿಗೆ ನೆರವು ನೀಡಲು ಇಚ್ಚಿಸುವವರು ಭಾಗ್ಯಶ್ರೀ ಬ್ಯಾಂಕ್ ಖಾತೆ 62505310837(IFSC code SBIN0020227) ಗೆ ಹಣ ಜಮಾ ಮಾಡಬಹುದು ಇಲ್ಲವೇ ಮಕ್ಕಳನ್ನು ಭೇಟಿ ಮಾಡಿ ನೆರವು ನೀಡಬಹುದಾಗಿದೆ. ಎನ್ನುವ ವಿಷಯ ಮಾದ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಪಂದಿಸಿ ನೆರವಿನ ಹಸ್ತ ನೀಡಲು ಮುಂದಾಗಿದ್ದಾರೆ.
ಮಕ್ಕಳ ಸಂಕಷ್ಟಕ್ಕೆ ಮಿಡಿದ ಪೊಲೀಸ್ ಅಧಿಕಾರಿಗಳು
ಹುಬ್ಬಳ್ಳಿ ಧಾರಾವಾಡದಲ್ಲಿ ಸಂಚಾರಿ ಉಪವಿಭಾಗೀಯ ಸಹಾಯಕ ಪೊಲೀಸ್ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಿತ್ತಾಪುರ ಹೆಮ್ಮೆಯ ವಿನೋದ್ ಎಂ. ಮುಕ್ತೇದಾರ, ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ ಹಾಗೂ ವಾಡಿ ಪಿಎಸ್ಐ ತಿರುಮಲೇಶ. ಕೆ ಅವರು ವೈಯುಕ್ತಿಕವಾಗಿ ತಲಾ ರೂ. 10 ಸಾವಿರದಂತೆ ಒಟ್ಟು 30 ಸಾವಿರ ಹಣವನ್ನು ಗುರುವಾರ ಸಂತ್ರಸ್ತ ಮಕ್ಕಳಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಪೊಲೀಸ್ ಅಧಿಕಾರಿಗಳ ಈ ಮಾನವೀಯತೆ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆಗೆ ಕಾರಣವಾಗಿದೆ.