ಆಗಸ್ಟ್ 17 ರಂದು ಕಾಳಗಿ ಪಟ್ಟಣ ಪಂಚಾಯಿತಿ ಚುನಾವಣೆ, ಮಾದರಿ ನೀತಿ ಸಂಹಿತೆ ಜಾರಿ: ಡಾ.ಡಿಗ್ಗಿ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಪಟ್ಟಣ ಪಂಚಾಯತಿಯ ಪ್ರಥಮ ಸಾರ್ವತ್ರಿಕ ಚುನಾವಣೆ ಆಗಸ್ಟ್ 17ರಂದು ಜರುಗಲಿದ್ದು, ಈ ನಿಮಿತ್ತ ಜುಲೈ 29 ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ ಎಂದು ಚುನಾವಣಾಧಿಕಾರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸಲಿಂಗಪ್ಪ ಡಿಗ್ಗಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಕರ್ನಾಟಕ ಪೌರಸಭೆಗಳ ನಿಯಮಗಳ ಅನುಸಾರ ಡಿಸಿ ಆದೇಶದಂತೆ ಕಾಳಗಿ ಪಟ್ಟಣ ಪಂಚಾಯಿತಿಯ 11 ಸ್ಥಾನಗಳಿಗೆ ಆಗಸ್ಟ್ 17ರಂದು ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ಆಗಸ್ಟ್ 5 ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಅಭ್ಯರ್ಥಿಗಳು ರಜಾ ದಿನ ಬಿಟ್ಟು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ತಾಪಂ ಕಾರ್ಯಾಲಯದಲ್ಲಿ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬಹುದಾಗಿದೆ ಎಂದು ಹೇಳಿದರು. ಆಗಸ್ಟ್ 6 ರಂದು ಬೆಳಗ್ಗೆ 11 ಗಂಟೆಗೆ ತಾಪಂ ಕಾರ್ಯಾಲಯದಲ್ಲಿ ನಾಮಪತ್ರ ಪರಿಶೀಲನೆ ಮಾಡಲಾಗುತ್ತದೆ. ಆಗಸ್ಟ್ 8 ರಂದು ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶವಿದೆ. ಆಗಸ್ಟ್ 17 ರಂದು ಬೆಳಗ್ಗೆ 7 ಗಂಟೆ ಯಿಂದ ಸಂಜೆ 5 ಗಂಟೆ ವರೆಗೆ ಮತದಾನ ಜರುಗಲಿದೆ. ಮರು ಮತದಾನ ಇದ್ದಲ್ಲಿ ಆಗಸ್ಟ್ 19 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಜರುಗಲಿದೆ. ಆಗಸ್ಟ್ 20 ರಂದು ಬೆಳಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಶುರುವಾಗಲಿದೆ ಎಂದು ಮಾಹಿತಿ ನೀಡಿದರು.
ಮೀಸಲಾತಿ ವಿವರ:
ಕಾಳಗಿ ಪಟ್ಟಣ ಪಂಚಾಯತಿಯ ಚುನಾವಣೆಯ 11 ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟವಾಗಿದ್ದು ವಾರ್ಡ್ ನಂ 1, ಇಳಿಗೇರ ಗಲ್ಲಿ (ಸಾಮಾನ್ಯ), ವಾರ್ಡ್ ನಂ. 2, ಮಲ್ಲಿಕಾರ್ಜುನ ಗುಡಿ ಏರಿಯಾ (ಸಾಮಾನ್ಯ), ವಾರ್ಡ್ ನಂ. 3, ಬಸವೇಶ್ವರ ಗುಡಿ ಏರಿಯಾ (ಸಾಮಾನ್ಯ ಮಹಿಳೆ), ವಾರ್ಡ್ ನಂ. 4, ಕುರುಬರ ಗಲ್ಲಿ (ಪರಿಶಿಷ್ಟ ಪಂಗಡ), ವಾರ್ಡ್ ನಂ. 5, ಬಡಿಗೇರ ಕಟ್ಟಿ ಏರಿಯಾ (ಸಾಮಾನ್ಯ), ವಾರ್ಡ್ ನಂ. 6, ಬೇಗರ ಗಲ್ಲಿ (ಸಾಮಾನ್ಯ ಮಹಿಳೆ), ವಾರ್ಡ್ ನಂ. 7, ರಾಮನಗರ (ಪರಿಶಿಷ್ಟ ಜಾತಿ), ವಾರ್ಡ್ ನಂ. 8. ಪೊಲೀಸ್ ಸ್ಟೇಷನ್ ಏರಿಯಾ (ಸಾಮಾನ್ಯ ಮಹಿಳೆ), ವಾರ್ಡ್ ನಂ. 9 ಲಕ್ಷ್ಮಣನಾಯಕ ನಾಯಕ ಮತ್ತು ಸುಬ್ಬು ನಾಯಕ ತಾಂಡಾ (ಪರಿಶಿಷ್ಟ ಜಾತಿ ಮಹಿಳೆ), ವಾರ್ಡ್ ನಂ.10 ನಾಮು ನಾಯಕ ಮತ್ತು ಕಿಂಡಿ ತಾಂಡಾ (ಪರಿಶಿಷ್ಟ ಜಾತಿ), ವಾರ್ಡ್ ನಂ. 11, ಕರಿಕಲ್ ತಾಂಡಾ ಮತ್ತು ದೇವಿಕಲ್ಲ ತಾಂಡಾ (ಪರಿಶಿಷ್ಟ ಜಾತಿ ಮಹಿಳೆ).

