Oplus_0

ಸೇತುವೆ ನಿರ್ಮಾಣ ಯಾವಾಗ ? | ಮಳೆ ಪ್ರವಾಹಕ್ಕೆ ಕೊಚ್ಚಿ ಹೋದ ದಂಡೋತಿ ಕಾಗಿಣಾ ನದಿ ಸೇತುವೆ ರಸ್ತೆ, ಸಂಚಾರಕ್ಕೆ ಸಂಚಕಾರ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದ ಹತ್ತಿರದ ಕಾಗಿಣಾ ನದಿ ಸೇತುವೆಯ ಮೇಲಿನ ಡಾಂಬರ್ ರಸ್ತೆ ಮತ್ತು ಸಿಮೆಂಟ್ ಕಾಂಕ್ರಿಟ್‌ ರಸ್ತೆ ಕಿತ್ತು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ಈ ಮಾರ್ಗದ ಕಲಬುರಗಿ, ಸೇಡಂ, ಕಾಳಗಿ ತಾಲೂಕುಗಳು ಸೇರಿದಂತೆ ಹಳ್ಳಿಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.

ಕಳೆದ ಗುರುವಾರ ದಿನವಿಡೀ ಪ್ರವಾಹದಲ್ಲಿ ಸೇತುವೆ ಮುಳುಗಿತ್ತು. ಶುಕ್ರವಾರ ಬೆಳಿಗ್ಗೆ ಪ್ರವಾಹ ಕಡಿಮೆಯಾದಾಗ ಸೇತುವೆ ಮೇಲಿನ ರಸ್ತೆ ಕಿತ್ತು ಹೋಗಿರುವುದು ಬೆಳಕಿಗೆ ಬಂದಿದೆ. ಸೇತುವೆ ಮೇಲಿನ ಅನೇಕ ಸಿಮೆಂಟ್ ಕಂಬಗಳು ಕೊಚ್ಚಿಕೊಂಡು ಹೋಗಿವೆ. ಸೇತುವೆ ಮೇಲೆ ಅಳವಡಿಸಿದ ಮೊಬೈಲ್ ನೆಟ್‌ವರ್ಕ್ ಕೇಬಲ್ ಕಿತ್ತು ಹೋಗಿದೆ.

ಸೇತುವೆ ಹದಗೆಟ್ಟಿದ್ದರಿಂದ ದಂಡೋತಿ ಸೇತುವೆ ಮಾರ್ಗವಾಗಿ ಕಲಬುರಗಿ, ಸೇಡಂಗೆ ನಿತ್ಯ ಸಂಚರಿಸುತ್ತಿದ್ದ ಬಸ್‌ಗಳು ಶಹಾಬಾದ್ ಮತ್ತು ಮಳಖೇಡ ಮಾರ್ಗವಾಗಿ ಸಂಚರಿಸುತ್ತಿವೆ.

ಸೇತುವೆ ನಿರ್ಮಾಣ ಯಾವಾಗ ?

ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಹತ್ತಿರ ಕಾಗಿಣಾ ನದಿ ಸೇತುವೆ ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹಕ್ಕೆ ಸಿಲುಕಿ ಮುಳುಗಡೆಯಾಗುತ್ತದೆ. ಈಗಾಗಲೇ ಈ ಸೇತುವೆ ಅವನತಿ ಹಂತಕ್ಕೆ ತಲುಪಿದ್ದು ಆಗಾಗ ದುರಸ್ತಿ ಕಾರ್ಯ ನಡೆಯುತ್ತಿರುತ್ತದೆ. ಸೇತುವೆ ಮುಳುಗಡೆಯಾದಗೊಮ್ಮೆ ರಸ್ತೆ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುತ್ತಾರೆ. ಹೀಗಾಗಿ ಈ ಸೇತುವೆಯ ಎತ್ತರ ಹೆಚ್ಚಿಸಿ ಹೊಸದಾದ ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದೆ.

ಈಗಾಗಲೇ ಮಳಖೇಡ ಹಾಗೂ ಶಹಾಬಾದ ಸೇತುವೆಗಳು ನಿರ್ಮಾಣಗೊಂಡ ಜನರಿಗೆ ಅನುಕೂಲ ಆಗಿದೆ ಅದರಂತೆ ದಂಡೋತಿ ಸೇತುವೆ ನಿರ್ಮಾಣ ಯಾವಾಗ ಆಗಲಿದೆ ಎಂಬುದು ಜನರ ಪ್ರಶ್ನೆಯಾಗಿದೆ.

ಕಲಬುರ್ಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ದಂಡೋತಿ ಕಾಗಿಣಾ ನದಿ ಸೇತುವೆ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ ಆದರೆ ಕಾಮಗಾರಿಗೆ ಮಾತ್ರ ಇನ್ನೂ ಚಾಲನೆ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೂಡಲೇ ಇತ್ತಕಡೆ ಗಮನ ಹರಿಸಿ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಬೇಕು ಎಂಬುದು ಜನರ ಆಗ್ರಹವಾಗಿದೆ.

Spread the love

Leave a Reply

Your email address will not be published. Required fields are marked *

error: Content is protected !!