ಮಾಡಬೂಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ರದ್ದು: ಸಹಾಯಕ ನಿಬಂಧಕರು ಆದೇಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮತಕ್ಷೇತ್ರದ ಮಾಡಬೂಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯನ್ನು ಸೇಡಂ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.
ಪಿಕೆಪಿಎಸ್ ಸದಸ್ಯ ಹಣಮಂತ ಬಸವರಾಜ ಹಡಪದ ಆಡಳಿತ ಮಂಡಳಿ ವಿರುದ್ಧ ಸಲ್ಲಿಸಿದ ದೂರಿನ ಆಧಾರದಲ್ಲಿ ಸಹಾಯಕ ನಿಬಂಧಕರು ಸಹಕಾರ ಸಂಘಗಳು ಸೇಡಂ ಉಪವಿಭಾಗ ನ್ಯಾಯಾಲಯ ಕೂಲಂಕುಷವಾಗಿ ಪರಿಶೀಲಿಸಿ ಆದೇಶಿಸಿದೆ.
(1) ಪಿಕೆಪಿಎಸ್ ಪೇಠಶೀರೂರ ಕಾರ್ಯವ್ಯಾಪ್ತಿಯ ಗ್ರಾಮಗಳಾದ ಮಾಡಬೂಳ, ಸಂಗಾವಿ, ಹದನೂರ ಮತ್ತು ಹಂಪಾಪೂರ ಇವುಗಳನ್ನು ಬೇರ್ಪಡಿಸಿ ಮತ್ತು ಪಿಕೆಪಿಎಸ್ ಹೆಬ್ಬಾಳ ಕಾರ್ಯವ್ಯಾಪ್ತಿಯ ಗ್ರಾಮಗಳಾದ ವಚ್ಚಾ, ಮುಗುಟಾ ಮತ್ತು ಗುಂಡಗುರ್ತಿ ಇವುಗಳನ್ನು ಬೇರ್ಪಡಿಸಿ ಸದರಿ ಗ್ರಾಮಗಳನ್ನು ಒಳಗೊಂಡಂತೆ ಪಿಕೆಪಿಎಸ್ ಮಾಡಬೂಳ ಸಂಘವನ್ನು ಹೊಸದಾಗಿ ಕಳೆದ 22 ನವೆಂಬರ್ 2024 ರಂದು ರಚಿಸಲಾಗಿತ್ತು. (2) ಹೊಸ ಪಿಕೆಪಿಎಸ್ ಮಾಡಬೂಳ ಸಂಘ ರಚನೆಯಾದ ನಂತರವು ಕೂಡ ಸದರಿ ಸಂಘದ ಕಾರ್ಯವ್ಯಾಪ್ತಿಯಲ್ಲಿರುವ ಮಾಡಬೂಳ, ಸಂಗಾವಿ, ಹದನೂರ, ಹಂಪಾಪೂರ ಗ್ರಾಮಗಳ ಸದಸ್ಯರು ಪಿಕೆಪಿಎಸ್ ಪೇಠಶೀರೂರ ಸಂಘದಲ್ಲಿ ತಮ್ಮ ಸದಸ್ಯತ್ವವನ್ನು ಮುಂದುವರೆಸಿರುತ್ತಾರೆ. (3) ವಚ್ಚಾ ಮತ್ತು ಮುಗುಟಾ ಗ್ರಾಮದ ಸದಸ್ಯರು ಕೂಡ ಪಿಕೆಪಿಎಸ್ ಹೆಬ್ಬಾಳ ಸಂಘದಲ್ಲಿ ಮುಂದುರೆದಿರುತ್ತಾರೆ.
(4) ಅಂದರೆ ಹೊಸದಾಗಿ ರಚನೆಯಾದ ಅರ್ಜಿದಾರ ಸಹಕಾರ ಸಂಘ ಪಿಕೆಪಿಎಸ್ ಮಾಡಬೂಳ ಕಾರ್ಯವ್ಯಾಪ್ತಿಯಲ್ಲಿ ಬರುವ ಮೇಲಿನ ಖಂಡಿಕೆ ಕ್ರಸಂ. 2 ಮತ್ತು 3 ರಲ್ಲಿ ನಮೂದಿಸದ ಗ್ರಾಮಗಳ ಸದಸ್ಯರು ಅನುಕ್ರಮವಾಗಿ ಪಿಕೆಪಿಎಸ್ ಪೇಠಶೀರೂರ ಮತ್ತು ಪಿಕೆಪಿಎಸ್ ಹೆಬ್ಬಾಳದಲ್ಲಿ ಮುಂದುವರೆಯುತ್ತಿರುವುದು ಮತದಾರರ ಪಟ್ಟಿಯನ್ನು (ಅನುಬಂಧ ಪಿ2) ಪರಿಶೀಲಿಸಲಾಗಿ ಈ ನ್ಯಾಯಾಲಯದ ಗಮನಕ್ಕೆ ಬಂದಿರುತ್ತದೆ ಎಂದು ತಿಳಿಸಿದ್ದಾರೆ.
ಒಂದೇ ತೆರನಾದ ಎರಡು ಸಹಕಾರ ಸಂಘಗಳಲ್ಲಿ ಸದಸ್ಯತ್ವ ಮುಂದುವರೆಸುವುದಕ್ಕೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ ಮತ್ತು ಇದು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 17ರ ಮೇರೆಗೆ ಈ ರೀತಿ ಎರಡು ಒಂದೇ ತೆರನಾದ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಮುಂದುವರಿಸಿದರೆ ಸದರಿ ಸದಸ್ಯರು ಅನರ್ಹತೆಗೆ ಒಳಗಾಗುತ್ತಾರೆ ಎನ್ನುವ ಅಂಶವನ್ನು ಈ ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿರುತ್ತದೆ.
ರೀಟರ್ನಿಂಗ್ ಅಧಿಕಾರಿ (ಎದುರು ಅರ್ಜಿದಾರರು ಕ್ರಸಂ 14) ಇವರು ತಮಗೆ ನಿರ್ವಹಿಸಲ್ಪಟ್ಟ ಶಾಸನಬದ್ಧ ಜವಾಬ್ದಾರಿಯನ್ನು ನಿರ್ಲಕ್ಷಿಸಿ ಕಾನೂನು ಮೇರೆಗೆ ಅರ್ಜಿದಾರ ಸಹಕಾರ ಸಂಘದ ಅಂತಿಮ ಮತದಾರರ ಪಟ್ಟಿ ಜಿಲ್ಲಾ ಚುನಾವಣಾಧಿಕಾರಿ (ಎದುರು ಅರ್ಜಿದಾರರು ಕ್ರ.ಸಂ. 15) ಇವರಿಂದ ಅನುಮೋದನೆಯಾಗದಿದ್ದರೂ ಕೂಡ ಸದರಿ ದೋಷಪೂರಿತ ಅಂತಿಮ ಮತದಾರರ ಪಟ್ಟಿಯನ್ನು ಆಧರಿಸಿ ಚುನಾವಣೆ ಜರುಗಿಸಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ.
ಮೇಲಿನ ಖಂಡಿಕೆಯಲ್ಲಿ ವಿವರಿಸಿದ ಚರ್ಚೆಯನ್ನಾಧರಿಸಿ ಈ ನ್ಯಾಯಾಲಯ ರೂಪಿಸಿರುವ ಮುದ್ದೆಗೆ ಇಲ್ಲ ಎನ್ನುವ ನಕಾರಾತ್ಮಕ ಉತ್ತರ ನೀಡುವುದು ಸೂಕ್ತ ನ್ಯಾಯೋಚಿತವೆಂದು ಈ ನ್ಯಾಯಾಲಯ ಭಾವಿಸಿದೆ.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಲ್ಲಿ ಚುನಾವಣೆಗೆ ಸಂಭಂಧಿಸಿದಂತೆ ಕಲ್ಪಿಸಿರುವ ಅವಕಾಶಗಳನ್ನು ಅನುಸರಿಸದೇ ಚುನಾವಣೆ ಜರುಗಿಸಿರುವುದು ಕಾನೂನು ಬಾಹಿರವಾಗಿದೆ ಎನ್ನುವ ಸ್ಪಷ್ಟ ಅಭಿಪ್ರಾಯಕ್ಕೆ ಈ ನ್ಯಾಯಾಲಯ ಬಂದಿರುತ್ತದೆ. ಈ ರೀತಿ ಕಾನೂನು ಬಾಹಿರವಾಗಿ ಜರುಗಿಸಿರುವ ಚುನಾವಣೆಯನ್ನು ರದ್ದುಗೊಳಿಸಬೇಕೆಂದು ಸ್ಪಷ್ಟ ಅಭಿಪ್ರಾಯನ್ನು ಕೂಡ ಸರ್ವೋಚ್ಚ ನ್ಯಾಯಾಲಯ ಈ ಕೆಳಗೆ ನಮೂದಿಸಿದ ಆದೇಶದಲ್ಲಿ ಉಲ್ಲೇಖಿಸಿದೆ. ಗಂಗಾಧರನ್ ನಾಯರ್ ಪಿ.ಮತ್ತು ಇತರರು ವಿರುದ್ಧ ಭಾಸ್ಕರನ್ ಎಂ ಮತ್ತು ಇತರರು (2017)13 ಎಸ್.ಸಿ.ಸಿ.573 ಆದ್ದರಿಂದ ಈ ಕೆಳಗಿನಂತೆ ಆದೇಶಿಸಿದೆ.
ಈ ಮೇಲಿನ ಖಂಡಿಕೆಯಲ್ಲಿ ವಿವರವಾಗಿ ಚರ್ಚಿಸಿದ ಅಂಶಗಳನ್ನಾಧರಿಸಿ ಅರ್ಜಿದಾರರ ಅರ್ಜಿಯನ್ನು ಪುರಸ್ಕರಿಸಿ, ಅರ್ಜಿದಾರರ ಸಹಕಾರ ಸಹಕಾರ ಸಂಘದ ಆಡಳಿತ ಮಂಡಳಿಗೆ 02 ಜೂನ್ 2025 ರಂದು ಘೋಷಿಸಿದ ಚುನಾವಣಾ ಫಲಿತಾಂಶವನ್ನು ಅನುಬಂಧ ಪಿ1 ರದ್ದುಪಡಿಸಿ ಈ ಕೂಡಲೇ ಜಾರಿಗೆ ಬರುವಂತೆ ಆದೇಶಿಸಿ ತೀರ್ಪನ್ನು ತೆರೆದ ನ್ಯಾಯಾಲಯದಲ್ಲಿ ಘೋಷಿಸಿದೆ. ಅರ್ಜಿದಾರರು ಮತ್ತು ಎದರು ಅರ್ಜಿದಾರರು ತಮ್ಮ ತಮ್ಮ ಕೋರ್ಟ ವೆಚ್ಚವನ್ನು ತಾವೇ ಭರಿಸಿಕೊಳ್ಳುವಂತೆ ಸೂಚಿಸಿದೆ. ಸದರಿ ತೀರ್ಪನ್ನು 26 ಆಗಸ್ಟ್ 2025 ರಂದು ನನ್ನ ಸಹಿ ಹಾಗೂ ಕಚೇರಿ ಮುದ್ರೆಯೊಂದಿಗೆ ಜಾರಿಗೊಳಿಸಿದೆ ಎಂದು ಸಹಕಾರ ಸಂಘಗಳು ಸಹಾಯಕ ನಿಬಂಧಕರು ತಿಳಿಸಿದ್ದಾರೆ.
“ಮಾಡಬೂಳ ಗ್ರಾಮದಲ್ಲಿ ಹೊಸದಾಗಿ ಸ್ಥಾಪಿತವಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಅಕ್ರಮವಾಗಿ ನಡೆದಿದ್ದು ಚುನಾಯಿತ ಆಡಳಿತ ಮಂಡಳಿ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿ ದೂರು ನೀಡಲಾಗಿತ್ತು, ಸೇಡಂ ಉಪವಿಭಾಗದ ಸಹಕಾರ ಸಂಘಗಳು ಸಹಾಯಕ ನಿಬಂಧಕರು ಕೂಲಂಕಷವಾಗಿ ಪರಿಶೀಲಿಸಿ ಅನರ್ಹಗೊಳಿಸಿ ಆದೇಶ ಹೊರಡಿಸಿದೆ. ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದೆ ನಮ್ಮ ಹೋರಾಟಕ್ಕೆ ಫಲ ದೊರೆತಿದೆ”.-ಹಣಮಂತ ಬೆಂಕಿ ಮುಗುಟಾ.

