Oplus_0

ಎಲ್ಲರ ಚಿತ್ತ ಚಿತ್ತಾಪುರದತ್ತ | ಆರ್.ಎಸ್.ಎಸ್ ಪಥಸಂಚಲನಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಆರ್.ಎಸ್.ಎಸ್ ಪಥಸಂಚಲನಕ್ಕೆ ಹೈಕೋರ್ಟ್ ನವೆಂಬರ್ 16 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30 ರವರೆಗೆ ಪಥಸಂಚಲನ ಹಾಗೂ ಕಾರ್ಯಕ್ರಮಕ್ಕೆ ಕೆಲವು ಷರತ್ತುಗಳಿಗೆ ಒಳಪಟ್ಟು ಅನುಮತಿ ನೀಡಿದ ಪ್ರಯುಕ್ತ ಇಂದು ಎಲ್ಲರ ಚಿತ್ತ ಚಿತ್ತಾಪುರದತ್ತ ನೆಟ್ಟಿದೆ.

ರಾತ್ರಿಯಿಂದಲೇ ಚಿತ್ತಾಪುರದಲ್ಲಿ ಪೊಲೀಸರ ದಂಡೆ ಬೀಡುಬಿಟ್ಟಿದ್ದು, ಪೊಲೀಸ್ ಸರ್ಪಗಾವಲು ಹಾಗೂ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪಥ ಸಂಚಲನ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30 ರವರೆಗೆ ನಡೆಯಲಿದೆ. ಇಂದಿನ ಪಥಸಂಚಲನಕ್ಕೆ ಹೊರಗಿನವರಿಗೆ ಅವಕಾಶ ಇಲ್ಲದೇ ಇರುವುದರಿಂದ ಪಟ್ಟಣದ ಶಹಾಬಾದ ರಸ್ತೆ, ಮಳಖೇಡ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್ ಹಾಕಿದ್ದು ಎಲ್ಲ ವಾಹನಗಳ ತಪಾಸಣೆಗೆ ಜನರ ವಿಚಾರಣೆ ಕಾರ್ಯ ನಡೆದಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ರೀತಿಯ ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಬಾರಿ ಚರ್ಚೆಯಲ್ಲಿದ್ದ ಆರ್.ಎಸ್.ಎಸ್ ಪಥ ಸಂಚಲನ ಇಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ನಡೆಯುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ. ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ ಇನ್ನೊಂದೆಡೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪೊಲೀಸರು ಬೀಡು ಬಿಟ್ಟಿದ್ದರಿಂದ ಪಟ್ಟಣದ ಜನರು ಹೌಹಾರಿದ್ದಾರೆ.

ಪಥಸಂಚಲನ ಮಾರ್ಗಗಳಾದ ಬಜಾಜ್ ಕಲ್ಯಾಣ ಮಂಟಪ, ಬಸ್ ನಿಲ್ದಾಣ, ಅಂಬೇಡ್ಕರ ವೃತ್ತ, ಸರ್ಕಾರಿ ಗ್ರಂಥಾಲಯ, ಬಸವ ಆಸ್ಪತ್ರೆ, ರಾಘವೇಂದ್ರ ಖಾನಾವಳಿ, ಕಾಶಿ ಗಲ್ಲಿಯ ಗಣೇಶ ಮಂದಿರ, ಕೆನರಾ ಬ್ಯಾಂಕ, ತಾಲೂಕು ಪಂಚಾಯತ ಕಾರ್ಯಾಲಯ, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಸವೇಶ್ವರ ವೃತ್ತದಿಂದ ಮರಳಿ ಬಜಾಜ್ ಕಲ್ಯಾಣ ಮಂಟಪ ಈ ಮಾರ್ಗದಲ್ಲಿ ಪೊಲೀಸ್ ಅಧಿಕಾರಿಗಳು ಕರ್ತವ್ಯದಲ್ಲಿದ್ದಾರೆ.

“ಹೈಕೋರ್ಟ್ ಅನುಮತಿ ಮೇರೆಗೆ ಇಂದು ನಡೆಯುತ್ತಿರುವ ಆರ್.ಎಸ್.ಎಸ್ ಪಥಸಂಚಲನಕ್ಕೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ 1 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ, ಸಿಸಿ ಕ್ಯಾಮೆರಾ ಹಾಗೂ ಡ್ರೋಣ್ ಕ್ಯಾಮೆರಾ ಅಳವಡಿಸಲಾಗಿದೆ”.-ಅಡ್ಡೂರು ಶ್ರೀನಿವಾಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಲಬುರಗಿ.

Spread the love

Leave a Reply

Your email address will not be published. Required fields are marked *

error: Content is protected !!