ಕನಕದರ್ಶನ ವಿಶೇಷ ಉಪನ್ಯಾಸ | ಕನಕದಾಸರು ಜ್ಞಾನ ಭಕ್ತಿ ಹಾಗೂ ವೈರಾಗ್ಯದ ಸಂಗಮ: ಶೇರಿಕಾರ ಅಭಿಮತ
ನಾಗಾವಿ ಎಕ್ಸಪ್ರೆಸ್
ಚಿಂಚೋಳಿ: ಕನಕದಾಸರ ಜೀವನ ಜ್ಞಾನ, ಭಕ್ತಿ ಮತ್ತು ವೈರಾಗ್ಯದ ಸಂಗಮವಾಗಿದೆ ಎಂದು ಪತ್ರಕರ್ತ ಜಗನ್ನಾಥ ಶೇರಿಕಾರ ಹೇಳಿದರು.
ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕರ್ನಾಟಕ ಸರ್ಕಾರದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರನ ಕಲಾನಿಕೇತನ ಟ್ರಸ್ಟ್ ಜಂಟಿಯಾಗಿ ಶುಕ್ರವಾರ ಆಯೋಜಿಸಿದ್ದ ಕನಕದರ್ಶನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಪರಿಪೂರ್ಣ ವ್ಯಕ್ತಿತ್ವದ ಸಮಾಜ ಸುಧಾರಕರಾದ ಕನಕದಾಸರು ಸಾಮಾಜಿಕ ಪಿಡುಗುಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ ಜಾತಿ ಮತದ ಸಂಕೋಲೆಗಳ ಕಳಚಿ ಜೀವನ ಸತ್ಯ ಬೋಧಿಸಿದ್ದಾರೆ ಎಂದು ತಿಳಿಸಿದರು.
ಕನಕದಾಸರು ಜೀವನವನ್ನು ಅರಿತುಕೊಂಡ ಮಹಾಜ್ಞಾನಿ. ತಮಗೆ ಸಿಕ್ಕನಿಧಿ ಜನರಿಗೆ ಹಂಚಿದಂತೆ ತಮ್ಮ ಜ್ಞಾನವೂ ಸಮಾಜಕ್ಕೆ ಧಾರೆ ಎರೆದು ಕನ್ನಡ ಸಾಹಿತ್ಯ ಲೋಕಕ್ಕೆ 4 ಅಮೂಲ್ಯ ಕೃತಿಗಳನ್ನು ನೀಡಿ ಮುಕ್ತಿಮಾರ್ಗ ತೋರಿದರು. ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ ಸಿಗದಿದ್ದಾಗ ಭಕ್ತಿಯಿಂದಲೇ ಸಾಕ್ಷಾತ್ ಕೃಷ್ಣನನ್ನು ತನ್ನತ್ತ ತಿರುಗುವಂತೆ ಮಾಡಿದ ಭಕ್ತ ಶ್ರೇಷ್ಠ ಎನಿಸಿಕೊಂಡಿದ್ದಾರೆ. ಸೇನಾಧಿಕಾರಿಯಾಗಿದ್ದ ಕನಕದಾಸರು ಯುದ್ಧದಲ್ಲಿ ಉಂಟಾದ ಸಾವುನೋವಿನಿಂದ ಜರ್ಜರಿತರಾಗಿ ವೈರಾಗ್ಯ ತಾಳಿ ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಂಡು ಸಮಾಜ ಶುದ್ಧೀಕರಿಸುವ ಕೆಲಸ ಮಾಡಿದರು. ಅವರ ಜೀವನ ಹಾಗೂ ಸಂದೇಶ ಮತ್ತು ಸಾರಿದ ತತ್ವ ಜಡತ್ವ ತುಂಬಿದ ಸಮಾಜಕ್ಕೆ ಪುನಶ್ಚೇತನ ನೀಡಿತು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ, ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆ ನೀವೇನಾದರೂ ಬಲ್ಲಿರಾ ಎಂದು ಪ್ರಶ್ನಿಸುತ್ತ ಸಮಾಜದ ತಾರತಮ್ಯ ಭಾವನೆ, ಅಂಕುಡೊಂಕು, ಡಂಭಾಚಾರ, ಮೌಢ್ಯತೆ ಕಿತ್ತೆಸೆದು ಸಮಾನತೆಯ ಸಮಾಜ ಕಟ್ಟಲು ಶ್ರಮಿಸಿದ ಕನಕದಾಸರ ಜೀವನ ಸಂದೇಶ ಇಂದಿಗೂ ಪ್ರಸ್ತುತ ಎಂದರು.
ಪ್ರಾಚಾರ್ಯ ಮಲ್ಲಿಕಾರ್ಜುನ ಪಾಲಾಮೂರ ಮಾತನಾಡಿ, ವೀರ ಕಲಿಯಾಗಿದ್ದ ಕನಕದಾಸ ವಿರಕ್ತಿ ಹೊಂದಿ ಭಗವಂತನ ದಾಸರಾದರು. ಮಾನವ ಜೀವನದ ಅಂತಿಮ ಸತ್ಯವನ್ನು ಅರಹಿದ ಪಂಡಿತೋತ್ತಮರಾಗಿದ್ದರು. ಕನಕದಾಸರ ಭಕ್ತಿ, ಸಂದೇಶ ಅನುಕರಣಿಯವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಧೂಳಪ್ಪ ಮಾಳೆನೋರ, ಕರ್ನಾಟಕ ಪ್ರದೇಶ ಕುರುಬ ಸಂಘದ ತಾಲೂಕು ಅಧ್ಯಕ್ಷ ಹಣಮಂತ ಪೂಜಾರಿ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಉಪನ್ಯಾಸಕ ಹಣಮಂತ ಕೋರೆ ಇದ್ದರು. ಕಲಾನಿಕೇತನ ಟ್ರಸ್ಟ್ ನ ಬಸವರಾಜ ಶಿಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು, ಚಕ್ರವರ್ತಿ ಸ್ವಾಗತಿಸಿದರು, ಮಧುಕರ ನಿರೂಪಿಸಿದರು, ಅಮಿತ್ ಕುಮಾರ್ ವಂದಿಸಿದರು.

