ಕೋಡ್ಲಿ ವಸತಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ- ಪಾಲಕರ ಸಭೆ | ಶಾಲೆಯ ಅಭಿವೃದ್ಧಿಗೆ ಶಿಕ್ಷಕರ ಜೊತೆಗೆ ಪೋಷಕರು ಸಹ ಕೈ ಜೋಡಿಸಿ: ಮಾಂಗ್
ನಾಗಾವಿ ಎಕ್ಸಪ್ರೆಸ್
ಕಾಳಗಿ: ಶಾಲೆಯ ಅಭಿವೃದ್ಧಿಗೆ ಶಿಕ್ಷಕರ ಜೊತೆಗೆ ಪೋಷಕರು ಸಹ ಕೈ ಜೋಡಿಸಬೇಕು ಎಂದು ಪ್ರಾಂಶುಪಾಲ ಡಾ. ರಾಜಶೇಖರ್ ಮಾಂಗ್ ಹೇಳಿದರು.
ತಾಲೂಕಿನ ಕೋಡ್ಲಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ ಹಾಗೂ ಪೋಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮ ಮಕ್ಕಳ ಕಲಿಕೆಯ ಬಗ್ಗೆ ಆಗಾಗ ಬಂದು ಚರ್ಚಿಸಬೇಕು. ಪೋಷಕರ ನಿರೀಕ್ಷೆಯಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯ ಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಶೇಕಡಾ ನೂರು ಫಲಿತಾಂಶ ಬಂದಿದೆ. ಈ ವರ್ಷ ಕೂಡ ಪ್ರತಿಶತ ಫಲಿತಾಂಶ ಪಡೆಯಲು ಅನೇಕ ಯೋಜನೆಗಳು ಹಾಕಿಕೊಳ್ಳಲಾಗಿದೆ. ಅದರ ಭಾಗವಾಗಿ ಮಕ್ಕಳಿಂದ ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ ಮೇಳ ಆಯೋಜಿಸಲಾಗಿದೆ ಎಂದರು.
ಪಾಲಕರಾದ ಮೀನಾಕ್ಷಿ ಸುರೇಶ ಬಡಿಗೇರ್ ಮಾತನಾಡಿ, ಕೋಡ್ಲಿ ವಸತಿ ಶಾಲೆಯಲ್ಲಿ ಸುರಕ್ಷತೆಯ ಜೊತೆಗೆ ನಮ್ಮ ಮಕ್ಕಳಿಗೆ ಉತ್ತಮವಾದ ಊಟೋಪಚಾರ, ಅಭ್ಯಾಸ ದೊರೆಯುತ್ತಿದೆ. ಎಲ್ಲಾ ಸಿಬ್ಬಂದಿಗಳು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೋಷಕ ಪ್ರತಿನಿಧಿ ಜಗನ್ನಾಥ ತಾಂಡೂರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೀರಭದ್ರಪ್ಪ ಓತಿ, ಮಾಣಿಕ ಕೊಡದೂರ, ನಾಗಶೆಟ್ಟಿ, ಗೋಪಾಲದಾಸ್ ಸಾಹುಕಾರ್, ರೇಖಾ ಸೇರಿಕಾರ, ಮಹಾನಂದ, ಕವಿತಾ, ತುಕಾರಾಂ ಚವ್ಹಾಣ, ಮಹೇಶ್ ಜಿ, ಶಿವಕುಮಾರ್ ಹಿರೇಮಠ, ಅಶೋಕ, ಜ್ಯೋತಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.
ರೇವಣಸಿದ್ದಯ್ಯ ಹಿರೇಮಠ ನಿರೂಸಿದರು, ಅಶೋಕ ಹಡಪದ ಸ್ವಾಗತಿಸಿದರು, ಶಿವಾನಂದ ಬೀಳಗಿ ವಂದಿಸಿದರು.

