ಚಿತ್ತಾಪುರ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ತಹಸೀಲ್ದಾರ್ ಗೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸರ್ಕಾರದ ಆದೇಶದಂತೆ ಪ್ರತಿ ಟನ್ ಕಬ್ಬಿಗೆ 3165 ರಂತೆ ರೈತರ ಖಾತೆಗೆ ಜಮಾ ಮಾಡಬೇಕು ಹಾಗೂ ತೊಗರಿ ಕಟಾವು ಮುಂಚೆಯೇ ಖರೀದಿ ಕೇಂದ್ರಗಳು ಪ್ರಾರಂಭ ಮಾಡಬೇಕು ಮತ್ತು ಪ್ರತಿ ಕ್ವಿಂಟಲ್ ತೊಗರಿ 10,500 ಧರ ನಿಗದಿ ಮಾಡಬೇಕೆಂಬ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ರೈತರು ಮಂಗಳವಾರ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಸಂಚಾಲಕ ವಿಜಯಕುಮಾರ್ ಯಾಗಾಪೂರ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ ಅತಿವೃಷ್ಟಿಯಿಂದ ರೈತರ ಬೆಳೆ ಹಾನಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದ ರೀತಿಯಲ್ಲಿ ಅನ್ನದಾತ ಕಷ್ಟಪಡುತ್ತಿದ್ದಾನೆ. ಅತಿವೃಷ್ಟಿಯಲ್ಲಿ ಅಲ್ಪಸ್ವಲ್ಪ ಬೆಳೆ ಬೆಳೆದು ರೈತ ಸಾಲವನ್ನು ತೀರಿಸಲು ಆಗುತ್ತಿಲ್ಲ ಆದ್ದರಿಂದ ತಕ್ಷಣ ಬೆಳೆ ಪರಿಹಾರ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ಹತ್ತಿ ಖರೀದಿ ಕೇಂದ್ರಗಳಲ್ಲಿ ಸಿಸಿಐ ಮತ್ತು ಹತ್ತಿ ಮೀಲ್ ಗಳು ಹಾಗೂ ಎಪಿಎಂಸಿ ಮಳಿಗೆಗಳು (ಅಡತ್) ಮನಬಂದಂತೆ ತೇವಾಂಶ ಮತ್ತು ತೂಕ ಇನ್ನಿತರ ನೆಪ ಹೇಳಿ ದರದಲ್ಲಿ ಮೋಸ ಮಾಡುತ್ತಿದ್ದಾರೆ ಆದ ಕಾರಣ ಕೂಡಲೇ ಎಪಿಎಂಸಿ ಕಾರ್ಯದರ್ಶಿಗಳಿಂದ ರೈತರ ಸುಮ್ಮುಖದಲ್ಲಿ ಸಭೆ ಕರೆದು ರೈತರಿಗೆ ಆಗುತ್ತಿರುವ ಮೋಸ ತಡೆಹಿಡಿಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಂತೇಶ್ ಎಸ್ ಜಮಾದಾರ್ ಮಾತನಾಡಿ, ಕೂಡಲೇ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಪರಿಹಾರ ರೈತರ ಖಾತೆಗೆ ಜಮಾ ಮಾಡಬೇಕು ಹಾಗೂ ಮಧ್ಯಂತರ ಬೆಳೆ ವಿಮಾ ಬಿಡುಗಡೆ ಮಾಡಬೇಕು. ಅತಿವೃಷ್ಟಿಯಿಂದ ಮುಂಗಾರು ಬೆಳೆ ಹಾನಿಯಾದ ಕಾರಣ ಹಿಂಗಾರು ಬಿತ್ತನೆಗೆ ಬೀಜ ಮತ್ತು ಗೊಬ್ಬರ ರೈತರಿಗೆ ಉಚಿತವಾಗಿ ನೀಡಬೇಕು. ಈ ಬೇಡಿಕೆಗಳು ಕೂಡಲೇ ಬಗೆಹರಿಸಬೇಕು ಒಂದು ವೇಳೆ ಬಗೇಹರಿಸದಿದ್ದರೆ ಚಿತ್ತಾಪುರ ತಾಲೂಕು ಬಂದ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಉಪಾಧ್ಯಕ್ಷ ಶಿವಯ್ಯ ಸ್ವಾಮಿ, ಜಿಲ್ಲಾ ಗೌರವಧ್ಯಕ್ಷ ವಿಠ್ಠಲ್ ಮಾಕಾ, ಜಿಲ್ಲಾ ಮಹಿಳಾ ಅಧ್ಯಕ್ಷೆ ಕಮಲಾಬಾಯಿ ಸಜ್ಜನ್, ಗೋವಿಂದ ಚವ್ಹಾಣ ಯಾಗಾಪೂರ ಸೇರಿದಂತೆ ಇತರರು ಇದ್ದರು.

