Oplus_0

ಧಾರವಾಡದಲ್ಲಿ ಶಾಂತಿಯುತ ಧರಣಿಗೆ ಮುಂದಾದ ಉದ್ಯೋಗಾಕಾಂಕ್ಷಿಗಳನ್ನು ಬಂಧಿಸಿದ ಸರ್ಕಾರದ ಕ್ರಮಕ್ಕೆ ಎಐಯುಟಿಯುಸಿ ತೀವ್ರ ಖಂಡನೆ

ನಾಗಾವಿ ಎಕ್ಸಪ್ರೆಸ್

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ತುಂಬಬೇಕು. ವಯೋಮಿತಿಯನ್ನು ಐದು ವರ್ಷ ಹೆಚ್ಚಿಸಬೇಕು, ನೇಮಕಾತಿ ಪರೀಕ್ಷೆಗಳ ಶುಲ್ಕ ಕಡಿತ ಮಾಡಬೇಕು. ಭ್ರಷ್ಟಾಚಾರ ತಡೆಗಟ್ಟಬೇಕು. ನೇಮಕಾತಿ ಪರೀಕ್ಷೆಗಳಿಗೆ ಪ್ರಯಾಣಿಸುವವರಿಗೆ ಉಚಿತ ಸಾರಿಗೆ ಸೌಲಭ್ಯ ನೀಡಬೇಕು ಇತ್ಯಾದಿ ಹಕ್ಕೊತ್ತಾಯಗಳಿಗಾಗಿ ಧಾರವಾಡದಲ್ಲಿ ಉದ್ಯೋಗಾಂಕ್ಷಿಗಳ ಹೋರಾಟ ಸಮಿತಿ ಸಂಘಟಿಸಿದ್ದ ಶಾಂತಿಯುತ ಧರಣಿಯನ್ನು ಪೊಲೀಸ್ ಬಲದ ಮೂಲಕ ಹತ್ತಿಕ್ಕಿದ ರಾಜ್ಯ ಸರ್ಕಾರದ ಕ್ರಮವನ್ನು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ ಯಾದಗಿರಿ, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನವಾದ ಡಿಸೆಂಬರ್ 10ರಂದೇ ರಾಜ್ಯದ ಯುವಜನರ ಪ್ರತಿಭಟನಾ ದನಿಯನ್ನು ಅಡಗಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ವಿರೋಧಾಭಾಸ, ಉದ್ಯೋಗ ಎಂಬ ತಮ್ಮ ಬದುಕುವ ಹಕ್ಕಿಗಾಗಿ ರಾಜ್ಯದ ಯುವ ಉದ್ಯೋಗಾಂಕ್ಷಿಗಳು ಹಲವಾರು ಬಾರಿ ಮನವಿ ಪತ್ರ ಸಲ್ಲಿಕೆ, ಪ್ರತಿಭಟನೆ ಯಂತಹ ವಿಧಾನಗಳನ್ನು ಅನುಸರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸರ ಗೊಡ್ಡು ಬೆದರಿಕೆಗಳಿಗೆ ಮಣಿಯದೆ ಸಂಘಟಿತ ಸಮರಶೀಲ ಹೋರಾಟಕ್ಕೆ ಮುಂದಾದ ಉದ್ಯೋಗಾಕಾಂಕ್ಷಿಗಳಿಗೆ ನಮ್ಮ ಕಾರ್ಮಿಕ ಸಂಘಟನೆಯು ಹೃತ್ಪೂರ್ವಕ ಕ್ರಾಂತಿಕಾರಿ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಬಿಜೆಪಿಗೆ ತಾನು ಪರ್ಯಾಯ ಎಂದು ಬಿಂಬಿಸುತ್ತಾ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇಂತಹ ದಮನಕಾರಿ ಕ್ರಮಕ್ಕೆ ಮುಂದಾಗಿರುವುದು ಶೋಚನೀಯ ಎಂದು ತಿಳಿಸಿದ್ದಾರೆ.

ದಿನನಿತ್ಯ ಸಂವಿಧಾನದ ಪೀಠಿಕೆಯನ್ನು ಪಠಿಸುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಶಾಂತಿಯುತ ಪ್ರತಿಭಟನೆ ಎಂಬುದು ಮೂಲಭೂತ ಹಕ್ಕು ಎಂಬುದನ್ನು ರಾಜ್ಯದ ಜನತೆ ಪಾಠ ಮಾಡಬೇಕಾದ ಕಾಲ ಬಂದಿದೆ. ಬಂಧಿಸಿದ ಎಲ್ಲ ಹೋರಾಟಗಾರರನ್ನು ಬೇಷರತ್ ಬಿಡುಗಡೆ ಮಾಡಬೇಕು, ಉದ್ಯೋಗಾಕಾಂಕ್ಷಿಗಳು ಸರ್ಕಾರದ ಇಂತಹ ದೌರ್ಜನ್ಯಗಳಿಗೆ ಮಣಿಯದೆ ತಮ್ಮ ಹೋರಾಟವನ್ನು ತೀವ್ರಗೊಳಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೋರಾಟ ನಿರತರೊಂದಿಗೆ ಮಾತುಕತೆ ನಡೆಸಿ, ಅವರ ನ್ಯಾಯಯುತ ಆಗ್ರಹಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!