ಕಡೇಚೂರು-ಬಾಡಿಯಾಳ ಘಟನೆ ಸಂಸದ ರಾಧಾಕೃಷ್ಣ ದೊಡ್ಡಮನಿ ಸಂತಾಪ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚನೆ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ನಡೆದ ಸಲ್ಫರ್ ಡೈಯಾಕ್ಸೈಡ್ ಅನಿಲ ಸೋರಿಕೆಯಿಂದ ಫಾರ್ಮಾ ಕಂಪನಿಯಲ್ಲಿ ಕರ್ತವ್ಯನಿರತ ಮೂವರು ಕಾರ್ಮಿಕರು ಮೃತಪಟ್ಟು ಮತ್ತಿಬ್ಬರು ತೀವ್ರ ಗಾಯಗೊಂಡ ಘಟನೆ ಕುರಿತು ಕಲಬುರಗಿ ಲೋಕಸಭಾ ಕ್ಷೇತ್ರದ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಜೊತೆ ದೂರವಾಣಿಯಲ್ಲಿ ಮಾತನಾಡಿರುವ ಸಂಸದರು, ಗಾಯಾಳುಗಳಿಗೆ ತುರ್ತು ಹಾಗೂ ಅಗತ್ಯ ಚಿಕಿತ್ಸೆ ದೊರಕಿಸಿಕೊಡುವಂತೆ ಅವರು ಸೂಚಿಸಿದ್ದಾರೆ.
ಫಾರ್ಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಪರಶೀಲನೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿರುವ ಅವರು ನಿಯಮಾವಳಿ ಮೀರಿದ್ದರೆ ಅಗತ್ಯ ಕ್ರಮವಹಿಸುವಂತೆ ಅವರು ನಿರ್ದೇಶನ ನೀಡಿದ್ದಾರೆ.
ದುರದೃಷ್ಟವಶಾತ್ ನಡೆದ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಬಡ ಕಾರ್ಮಿಕರ ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿರುವ ರಾಧಾಕೃಷ್ಣ ದೊಡ್ಡಮನಿ ಅವರು ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

