ಹೊನಗುಂಟಾ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಚಾರ: ಪಿಡಿಓ ವಿರುದ್ಧ ಆಯುಕ್ತರಿಗೆ ದೂರು
ನಾಗಾವಿ ಎಕ್ಸಪ್ರೆಸ್
ಶಹಾಬಾದ: ತಾಲೂಕಿನ ಹೊನಗುಂಟಾ ಗ್ರಾಮ ಪಂಚಾಯತಿಯಲ್ಲಿ 15 ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಭ್ರಷ್ಟಚಾರ, ಹಣ ದುರ್ಬಳಿಕೆ ಹಾಗೂ ತೆರಿಗೆ ವಸೂಲಿ ಮತ್ತು ಸಿಬ್ಬಂದಿ ವೇತನವನ್ನು ಅಕ್ರಮವಾಗಿ ಬಳಸಿಕೊಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಬೆಂಗಳೂರಿನ ಪಂಚಾಯತ ರಾಜ್ ಆಯುಕ್ತರಿಗೆ ಕರ್ನಾಟಕ ಪ್ರಾಂತ ರೈತ ಸಂಘ ಶಹಾಬಾದ ತಾಲೂಕು ಅಧ್ಯಕ್ಷ ರಾಯಪ್ಪ ಹುರಮುಂಜಿ ದೂರು ನೀಡಿದ್ದಾರೆ.
ಶಹಾಬಾದ ತಾಲೂಕಿನ ಹೊನಗುಂಟಾ ಗ್ರಾಮ ಪಂಚಾಯಿತಿಯಲ್ಲಿ ಸೆ.2023 ರಿಂದ ಆ.2024 ರ ವರಗೆ 15 ನೇ ಹಣಕಾಸು ಯೋಜನೆಯಡಿ ಅನುಮೋದಿತ ಕ್ರಿಯಾ ಯೋಜನೆ ಪ್ರಕಾರ ಕಾಮಗಾರಿಗಳಿಗೆ ಅನುದಾನ ಬಳಸದೆ ಸುಮಾರು 18 ಲಕ್ಷ ರೂಪಾಯಿಗಳ ಅಧಿಕ ಮೊತ್ತದ ಹಣ ಪಂಚಾಯತ ರಾಜ್ ನಿಯಮ ಉಲ್ಲಂಘನೆ ಮಾಡಿ ಬೇಕಾಬಿಟ್ಟಿ ಹಣ ಕೆಲವು ಏಜೆನ್ಸಿ ಗಳಿಗೆ ಪಿಡಿಓ ಅವರು ಅಕ್ರಮವಾಗಿ ಪಾವತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪಂಚಾಯಿತಿ ತೆರಿಗೆ ವಸೂಲಿ ಮತ್ತು ಸಿಬ್ಬಂದಿ ವೇತನದಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಸ್ವಚ್ಚತಾ ನೈರ್ಮಲ್ಯ ಹಾಗೂ ಕುಡಿಯುವ ನೀರು ನಿರ್ವಹಣೆ ಕಾಮಗಾರಿ ಹೆಸರಿನಲ್ಲಿ ಹಣ ಲೂಟಿ ಮಾಡಿದ್ದಾರೆ. ವಿದ್ಯುತ್ ಬಲ್ಪ್ ಖರೀದಿ ಮಾಡಿ, ಕಾನೂನು ಬಾಹಿರವಾಗಿ ತಮಗೆ ಬೇಕಾದ ವ್ಯಕ್ತಿಗಳ ಖಾತೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಪಂಚಾಯತ್ ರಾಜ್ ಆಯುಕ್ತರಿಗೆ ಬರೆದ ಪತ್ರದಲ್ಲಿ ರಾಯಪ್ಪ ಅವರು ದೂರಿದ್ದಾರೆ.
ಕಾಮಗಾರಿಗಳ ಟೆಂಡರ್ ಕರೆಯದೆ ಕೆಟಿಪಿಪಿ ಆಕ್ಟ್ ನಿಯಮ ಉಲ್ಲಂಘನೆ ಮಾಡಿ ಕಾಮಗಾರಿಗಳ ಹೆಸರಿನಲ್ಲಿ ಅಕ್ರಮವಾಗಿ ಹಣ ಪಾವತಿಸಲಾಗಿದೆ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಚರಂಡಿ ಸಮಸ್ಯೆ, ರಸ್ತೆ ಕಾಮಗಾರಿ ಸೇರಿದಂತೆ ಕನಿಷ್ಠ ಮೂಲ ಸೌಕರ್ಯಗಳಿಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ತಿಳಿಸಿದ್ದಾರೆ.
ಹೊನಗುಂಟಾ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ಭ್ರಷ್ಟಾಚಾರ ನಡೆಸಿದ ಪಿಡಿಒ ವಿರುದ್ಧ ಕ್ರಮ ಗೈಗೊಳ್ಳುವಂತೆ ಈಗಾಗಲೇ ಕಲಬುರ್ಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳಿಗೆ ಮತ್ತು ಶಹಾಬಾದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೂ ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ತಕ್ಷಣ ಪಿಡಿಓ ವಿರುದ್ಧ ಇಲಾಖೆ ತನಿಖೆ ನಡೆಸಿ ಸೇವೆಯಿಂದ ಅಮಾನತು ಮಾಡಬೇಕು ಮತ್ತು ಅಧ್ಯಕ್ಷರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೇ ಧರಣಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಆಯುಕ್ತರಿಗೆ ಬರೆದ ಪತ್ರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಶಹಾಬಾದ ತಾಲೂಕು ಅಧ್ಯಕ್ಷ ರಾಯಪ್ಪ ಹುರಮುಂಜಿ ಎಚ್ಚರಿಸಿದ್ದಾರೆ.