Oplus_0

ಮಾಜಿ ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದು ಖಂಡನೀಯ: ಬೆಣ್ಣೂರಕರ್ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಸೇಡಂ ಕ್ಷೇತ್ರದ ಮಾಜಿ ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರೊಬ್ಬರು ಕೆಟ್ಟ ಪದಗಳಿಂದ ನಿಂದಿಸಿದ್ದು ಖಂಡನೀಯ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿದ್ದ 39 ಸಾವಿರ ಕೋಟಿ ಅನುದಾನ ದುರ್ಬಳಕೆ ಆಗಿರುವ ಕುರಿತು ರಾಜಕುಮಾರ್ ಪಾಟೀಲ ತೇಲ್ಕೂರ್ ಅವರು ಪತ್ರಿಕೆ ಹೇಳಿಕೆ ನೀಡಿದ್ದಾರೆ. ಇದನ್ನು ಸಹಿಸಿಕೊಳ್ಳಕ್ಕಾಗದ ಸಚಿವರ ಬೆಂಬಲಿಗ ಚಂದ್ರಶೇಖರ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಉದ್ದೇಶಪೂರ್ವಕವಾಗಿ ಅಸಂವಿಧಾನಿಕ ಪದಗಳಿಂದ ನಿಂದಿಸಿದ್ದಾನೆ. ಈ ಕುರಿತು ಈಗಾಗಲೇ ಕಲಬುರಗಿಯ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜಕುಮಾರ್ ಪಾಟೀಲ ತೇಲ್ಕೂರ್ ಸಮರ್ಥವಾಗಿ ಮಾತನಾಡುತ್ತಾರೆ ಹಾಗೂ ತಕ್ಕ ಉತ್ತರ ನೀಡುತ್ತಾರೆ ಎನ್ನುವ ಉದ್ದೇಶದಿಂದ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಸಚಿವರ ಹಿಂಬಾಲಕ ಅಶ್ಲೀಲ ಪದಗಳಿಂದ ಕಾಮೆಂಟ್ ಮಾಡಿರುವುದು ಸರಿಯಲ್ಲ. ರಾಜಕಾರಣದಲ್ಲಿ ಆರೋಗ್ಯಕರ ಕಾಮೆಂಟ್ ಇರಲಿ, ಪ್ರಶ್ನೆ ಮಾಡಿದವರ ವಿರುದ್ಧವೇ ಕೆಟ್ಟ ಪದಗಳಿಂದ ಕಾಮೆಂಟ್ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.

ಸದಾ ಅಂಬೇಡ್ಕರ್ ಮತ್ತು ಸಂವಿಧಾನ ಬಗ್ಗೆ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ, ದಲಿತರಿಗೆ ಮೀಸಲಿಟ್ಟ 39 ಸಾವಿರ ಕೋಟಿ ಹಣ ದುರುಪಯೋಗವಾದರೂ ಸಹ ಮೌನವಹಿಸಿದ್ದು ಏಕೆ?. ಈ ಕುರಿತು ಮಾತನಾಡಲಿ ಎಂದು ಸವಾಲು ಹಾಕಿದರು.

ದಲಿತರ ಪರ ಕಾಳಜಿಯಿರುವ ಹಾಗೂ ಎಲ್ಲಾ ಜಾತಿ ಜನಾಂಗದವರನ್ನು ಸಮನಾಗಿ ತೆಗೆದುಕೊಂಡು ಹೋಗುವ ರಾಜಕುಮಾರ್ ಪಾಟೀಲ ತೇಲ್ಕೂರ್ ವಿರುದ್ಧ ಹಗುರವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ, ಇದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಬೆಣ್ಣೂರಕರ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಆನಂದ ಇಂಗಳಗಿ, ಈಶ್ವರ ದೊಡ್ಡಮನಿ, ಶಿವರಾಮ್ ಚವ್ಹಾಣ, ನವೀನ್ ನಂದೂರ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!