ಕೊಂಚೂರ ಹನುಮಾನ ಮಂದಿರ ಟ್ರಸ್ಟ್ ಹೆಸರಿನಲ್ಲಿ ನಕಲಿ ಟ್ರಸ್ಟ್ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮಕ್ಕೆ ರೈತ ಸಂಘ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಕೊಂಚೂರ ಗ್ರಾಮದ ಶ್ರೀ ಹನುಮಾನ ಮಂದಿರ ಟ್ರಸ್ಟ್ ಕೊಂಚೂರ ಎಂಬ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ನೀಡಿ, ಅಧ್ಯಕ್ಷರಾಗಿ ಅಶೋಕ ಗಿಲ್ಡಾ ಹೈದ್ರಾಬಾದ ಮತ್ತು ಅವರ ಸಂಗಡಿಗರು ಸೇರಿ ಕೊಂಚೂರ ಗ್ರಾಮದಲ್ಲಿ ಟ್ರಸ್ಟ್ ರಚನೆ ಮಾಡಿಕೊಂಡು, ದೇವರ ಹೆಸರಿನಲ್ಲಿ ಅಧಿಕಾರ ಚಲಾಯಿಸಿ, ಊರಿನ ಜಾಗವನ್ನು ವಶಪಡಿಸಿಕೊಂಡು ದೇವರ ಆಭರಣ, (ಸುಮಾರು ಒಂದು ಕೆಜಿಗಟ್ಟಲೆ ಬಂಗಾರ, ಬೆಳ್ಳಿ) ಕೋಟ್ಯಾಂತರ ಹಣ ದುರ್ಬಳಕೆ ಮಾಡಿಕೊಂಡಿರುತ್ತಾರೆ ಹೀಗಾಗಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಮೇಶ ಭೀಮರಾಯ ಡಿ.ಸಿ ಆಗ್ರಹಿಸಿದ್ದಾರೆ.
ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಲೆಕ್ಕ ಮತ್ತು ವ್ಯವಹಾರದ ದಾಖಲೆ ಇಟ್ಟುಕೊಂಡಿರುವುದಿಲ್ಲ, ಎಲ್ಲಿಂದಲೋ ದೂರದ ಊರಿಂದ ಬಂದು ನಮ್ಮ ಊರಿನಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು, ನಮ್ಮಲ್ಲಿ ಎರಡು ಗುಂಪುಗಳನ್ನು ಮಾಡಿ, ನಮ್ಮಗಳ ನಡುವೆ ದ್ವೇಷ, ಜಗಳ, ವಿಷಬೀಜ ಬಿತ್ತಿ ಅಧಿಕಾರ ಚಲಾಯಿಸುತ್ತಿದ್ದಾರೆ. ಈ ಕುರಿತು ಯಾರಾದರೂ ಪ್ರಶ್ನಿಸಿದರೆ ದಬ್ಬಾಳಿಕೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸದರಿ ಟ್ರಸ್ಟ್ ಅನ್ನು ಸರ್ಕಾರವೇ ಆಧೀನದಲ್ಲಿ ತೆಗೆದುಕೊಳ್ಳಬೇಕು ಅಥವಾ ಸ್ಥಳೀಯ ನಿವಾಸಿಗಳಿಗೆ ಹೊಸ ಟ್ರಸ್ಟ್ ಸ್ಥಾಪಿಸಲು ಅವಕಾಶ ಮಾಡಿಕೊಡಬೇಕು ಮತ್ತು ಈಗ ಇರುವ ಶ್ರೀ ಹನುಮಾನ ಮಂದಿರ ಟ್ರಸ್ಟ್ ಕೊಂಚೂರ ಅಧ್ಯಕ್ಷ ಅಶೋಕ ಗಿಲ್ಡಾ ಹೈದ್ರಾಬಾದ ಮತ್ತು ಅವರ ಸಂಗಡಿಗರ ವಿರುದ್ಧ ತನಿಖೆ ನಡೆಸಿ, ಅವರು ಕಬಳಿಸಿರುವ ಆಸ್ತಿಯನ್ನು ವಸೂಲಿ ಮಾಡಿ, ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ತಾಲೂಕಿನ ಕೊಂಚೂರ ಗ್ರಾಮದ ಶ್ರೀ ಹನುಮಾನ ದೇವಸ್ಥಾನದ ಪೂಜಾರಿಗಳ ವಿವಾದ, ಆಸ್ತಿ ಜಮೀನು ಸಂರಕ್ಷಣೆ ಹಾಗೂ ಟ್ರಸ್ಟ್ ನ ಜವಾಬ್ದಾರಿ ಕುರಿತು ಕಳೆದ 16 ಸೆಪ್ಟೆಂಬರ್ 2021 ರಂದು ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಹಾಗೂ ಆರಕ್ಷಕ ವೃತ್ತ ನಿರೀಕ್ಷಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಟ್ರಸ್ಟ್ ವಿವಾದ ಕುರಿತು ಸದ್ಯ ಇರುವ ಟ್ರಸ್ಟ ಅವರ ಬೈಲಾ ಪ್ರಕಾರ ಕಾರ್ಯನಿರ್ವಹಿಸುತ್ತಿರುವ ಮತ್ತು ಕಾನೂನಿನ ಅಡಿ ಸದಸ್ಯರ ಮತ್ತು ಅಧ್ಯಕ್ಷರ ಬದಲಾವಣೆ ಮಾಡಿರುವ ಕುರಿತು ಸಕ್ಷಮ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಿ ಇತ್ಯರ್ಥ ಪಡಿಸಿಕೊಳ್ಳುವುದು, ಅಲ್ಲಿಯವರೆಗೆ ಈ ಹಿಂದೆ ಸ್ಥಾಪಿತವಾದ ಟ್ರಸ್ಟ್ ಪದಾಧಿಕಾರಿಗಳು ಮುಂದುವರಿಸುವುದು ಸೂಕ್ತವೆಂದು ನಿರ್ಣಯಿಸಲಾಗಿರುತ್ತದೆ. ಅಲ್ಲದೆ ಟ್ರಸ್ಟ್ ಕಮಿಟಿಯು ತಮ್ಮ ಬೈಲಾ ಪ್ರಕಾರವೇ ಕಾರ್ಯನಿರ್ವಹಿಸಲು ಮತ್ತು ಪ್ರತಿ ವರ್ಷ ಲೆಕ್ಕ ಪರಿಶೋಧನೆ ಮಾಡಲು ಮತ್ತು ಯಾವುದೇ ಅವ್ಯವಹಾರಕ್ಕೆ ಅಸ್ಪದ ನೀಡದೆ ಕರ್ತವ್ಯ ನಿರ್ವಹಿಸುವಂತೆ ನಿರ್ಣಯಿಸಲಾಗಿತ್ತು. ಆದರೆ ಇಲ್ಲಿವರೆಗೆ ದೇವಸ್ಥಾನ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ, ಈ ಕುರಿತು ವಾಡಿ ಪಿಎಸ್ಐ, ತಹಸೀಲ್ದಾರ್, ಸೇಡಂ ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಹೀಗಾಗಿ ಇದರಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಅನುಮಾನವಿದೆ ಎಂದು ಆರೋಪಿಸಿದ್ದಾರೆ.
“ಚಿತ್ತಾಪುರ ತಾಲೂಕಿನ ಕೊಂಚೂರ ಗ್ರಾಮದ ಶ್ರೀ ಹನುಮಾನ ದೇವಸ್ಥಾನದ ಹೆಸರಿನಲ್ಲಿ ನಕಲಿ ಟ್ರಸ್ಟ್ ಸ್ಥಾಪಿಸಿ, ದೇವಸ್ಥಾನದ ಅಧಿಕಾರ ದುರ್ಬಳಕೆ ಮಾಡಿಕೊಂಡು, ದೂರದ ಆಂಧ್ರ ಮೂಲದ ವಾಸಿಗಳು ದೇವರ ಹೆಸರಿನಲ್ಲಿ ಊರಿನ ಜನರನ್ನು ನಂಬಿಸಿ, ಹಣ, ಬಂಗಾರ ಮತ್ತು ದೇವಸ್ಥಾನದ ಜಾಗವನ್ನು ದುರ್ಬಳಕೆ ಮಾಡಿಕೊಂಡು ಊರಿನ ಜನರಲ್ಲಿ ದ್ವೇಷದ ವಿಷಬೀಜ ಬಿತ್ತಿ ನಮ್ಮಗಳ ಮಧ್ಯೆ ಜಗಳ ಹಚ್ಚಿ ಊರಿನ ಶಾಂತಿ ಹಾಳುಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಊರಿನ ಜನತೆಗೆ ನೆಮ್ಮದಿ ಒದಗಿಸಲು ಮತ್ತು ಅಧ್ಯಕ್ಷ ಅಶೋಕ ಗಿಲ್ದಾ ಹೈದ್ರಾಬಾದ ಮತ್ತು ಅವರ ಸಂಗಡಿಗರ ವಿರುದ್ಧ ತನಿಖೆ ನಡೆಸಿ, ಅವರು ಕಬಳಿಸಿರುವ ಆಸ್ತಿಯನ್ನು ವಸೂಲಿ ಮಾಡಿ, ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಬೇಕು”.-ರಮೇಶ ಭೀಮರಾಯ ಡಿ.ಸಿ, ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ.

