ಚಿತ್ತಾಪುರದಲ್ಲಿ ಮಾ.17 ರಂದು ಶ್ರೀ ಮಹಾನಂದಿ ಮೂರ್ತಿ ಸ್ಥಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಸಮಾರಂಭ: ಶಾಂತಕುಮಾರ್ ಹತ್ತಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಶ್ರೀ ಸಾವಳಗಿ ಶಿವಲಿಂಗೇಶ್ವರ ಮಠ, ಶ್ರೀ ನಾಗಾವಿ ಗೋಶಾಲೆ ಹತ್ತಿರ ಶ್ರೀ ಮಹಾನಂದಿ ಮೂರ್ತಿ ಪ್ರತಿಷ್ಠಾಪನಾ ಸಮಿತಿ ವತಿಯಿಂದ ಇದೇ ಮಾ.17 ರಂದು ಬೆಳಿಗ್ಗೆ 10.45 ಕ್ಕೆ ನವೀಕರಣಗೊಂಡ ಶಿಲಾ ಮಂಟಪದಲ್ಲಿ ಶ್ರೀ ಮಹಾನಂದಿ ಸ್ಥಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಶಾಂತಕುಮಾರ್ ಹತ್ತಿ, ಗೋಶಾಲೆ ಅಧ್ಯಕ್ಷ ರಮೇಶ್ ಬೊಮ್ಮನಳ್ಳಿ ಅವರು ಹೇಳಿದರು.
ಗೋಶಾಲೆಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತೀರ ಹಳೆಯದಾದ ಹಾದಿ ಬಸವಣ್ಣ ಮೂರ್ತಿ ಭಗ್ನವಾಗಿತ್ತು ಮತ್ತು ಇದಕ್ಕೆ ಯಾವುದೇ ರಕ್ಷಣೆ ಇರಲಿಲ್ಲ, ಹೀಗಾಗಿ ಇದರ ಜೀರ್ಣೋದ್ಧಾರ ಮಾಡಬೇಕೆಂಬ ಇಲ್ಲಿನ ಜನರ ಬಹುದಿನಗಳ ಕನಸು ಆಗಿತ್ತು ಅದು ಈಗ ಸಾಕಾರಗೊಂಡಿದೆ ಎಂದು ಹೇಳಿದರು.
ಈ ಭಾಗದ ಜನರು ಹಾಗೂ ಮುಖಂಡರು ದೇಣಿಗೆ ನೀಡಿದ್ದರಿಂದ ಅಂದಾಜು 5 ಲಕ್ಷಕ್ಕೂ ಅಧಿಕ ಹಣದಲ್ಲಿ ಸುಸಜ್ಜಿತ ಶಿಲಾ ಮಂಟಪ, 3 ಫೀಟ್ ಎತ್ತರದ ಮಹಾನಂದಿ ಮೂರ್ತಿ ಸ್ಥಾಪನೆ ಕಾರ್ಯ ಭರದಿಂದ ಸಾಗಿದೆ ಎಂದು ಹೇಳಿದರು.
ಅಂದಿನ ಕಾರ್ಯಕ್ರಮದಲ್ಲಿ ಮುಗಳಕೋಡ – ಜಿಡಗಾ ಮಠದ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು, ಚಿತ್ತಾಪುರ – ಸಾವಳಗಿ(ಬಿ) ಜಗದ್ಗುರು ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಗುರುನಾಥ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು ಹಾಗೂ ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ನೇತೃತ್ವ ವಹಿಸುವರು. ಗೌರವ ಅತಿಥಿಗಳಾಗಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಸಮಿತಿ ಅಧ್ಯಕ್ಷ ಶಾಂತಕುಮಾರ್ ಹತ್ತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಶ್ರೀ ರಾಚೋಟೇಶ್ವರ ವೈದಿಕ ಬಳಗದಿಂದ ಮಹಾನಂದಿಗೆ ಮಹಾಆರತಿ, ಪ್ರಖ್ಯಾತ ಕಾಶಿ ವಿಶ್ವನಾಥ ಕ್ಷೇತ್ರದ ಶೈಲಿಯ ಆರತಿ ಹಾಗೂ ಮುತ್ತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಚಂದ್ರಶೇಖರ ಉಟಗೂರ್, ಅನೀಲ್ ವಡ್ಡಡಗಿ, ಬಸವರಾಜ ಕಾಳಗಿ, ಬಸವರಾಜ ಸಂಕನೂರ, ಬಸವರಾಜ ಹೂಗಾರ, ರಮೇಶ್ ಕಾಳನೂರ ಸೇರಿದಂತೆ ಇತರರು ಇದ್ದರು.

