ವಿಶ್ವ ಮಹಿಳಾ ದಿನಾಚರಣೆ | ಸೃಷ್ಟಿಯ ಶಕ್ತಿಯೇ ಸ್ತ್ರೀ, ಅವಳ ಜಾಗೃತಿಯೇ ನೈಜ ಮಹಿಳಾ ದಿನಾಚರಣೆ: ಸ್ವಾಮಿ ಧೀರಾನಂದಜಿ

ನಾಗಾವಿ ಎಕ್ಸಪ್ರೆಸ್ 

ತುಮಕೂರು: ಹೆಣ್ಣು ಸೃಷ್ಟಿಯಲ್ಲಿ ಶಕ್ತಿಯ ರೂಪ, ಅವಳಲ್ಲಿಯೇ ಅಡಗಿರುವ ಸುಪ್ತ ಚೇತನವನ್ನು ಜಾಗೃತಗೊಳಿಸಿ, ಅವಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದೇ ಮಹಿಳಾ ದಿನಾಚರಣೆಯ ನೈಜ ಆಚರಣೆ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಪರಮ ಪೂಜ್ಯ ಶ್ರೀಮದ್ ಸ್ವಾಮಿ ಧೀರಾನಂದಜಿ ಅವರು ಅಭಿಪ್ರಾಯಪಟ್ಟರು.

ನಗರದ ಯೋಗ ಭವನದಲ್ಲಿ ಭಾನುವಾರ ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ (ರಿ), ಬೆಂಗಳೂರು ಹಾಗೂ ತುಮಕೂರು ಜಿಲ್ಲಾ ಆರ್ಯ ಈಡಿಗ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಮಹಿಳಾ ದಿನಾಚರಣೆ’ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆ.ಪಿ.ಎನ್.ಪಿ ಪ್ರತಿಷ್ಠಾನದ ಮಹಾಪೋಷಕಿ ಲತಾ ಸುಧಾಕರ್ ಅವರು ಮಾತನಾಡಿ, ಮಹಿಳೆಯರು ಇಂದು ಕೇವಲ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ. ಶಿಕ್ಷಣ ಮತ್ತು ಧೈರ್ಯದ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಪ್ರತಿಷ್ಠಾನವು ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಶೈಕ್ಷಣಿಕ ಪ್ರಗತಿಗೆ ಸದಾ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ತುಮಕೂರು ಸೈಬರ್ ಕ್ರೈಂ ವಿಭಾಗದ ಡಿವೈಎಸ್ಪಿ ಜಯಲಕ್ಷ್ಮೀ ಮಾತನಾಡಿ, ಮಹಿಳೆಯರು ಡಿಜಿಟಲ್ ಜಗತ್ತಿನಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವಿಶ್ವ ಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷ ಟಿ.ಎ.ಪಿ. ಶೆಣೈ ಅವರು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಸ್ತ್ರೀಶಕ್ತಿಗಿರುವ ಉನ್ನತ ಸ್ಥಾನಮಾನದ ಬಗ್ಗೆ ಬೆಳಕು ಚೆಲ್ಲಿದರು.

ಜೆ.ಪಿ.ಎನ್.ಪಿ ಜಿಲ್ಲಾ ಮುಖ್ಯ ಸಂಚಾಲಕ ಜೆ.ಪಿ. ಶಿವಣ್ಣ ಮಲ್ಲಸಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ. ನಾಗರಾಜ್, ವಿಭಾಗೀಯ ಸಂಚಾಲಕ ಪುರುಷೋತ್ತಮ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಮೃತ ಕೆ ಪ್ರಾರ್ಥಿಸಿದರು, ಪ್ರಜ್ಞಾ ಸ್ವಾಗತಿಸಿದರು, ಕಾಶಿಬಾಯಿ ಸಿ ಗುತ್ತೇದಾರ ನಿರೂಪಿಸಿದರು, ಕವಿತಾ ಟಿ ಅತಿಥಿಗಳನ್ನು ಪರಿಚಯಿಸಿದರು ಮತ್ತು ಸಹನಾ ವಂದಿಸಿದರು. ಅಪಾರ ಸಂಖ್ಯೆಯ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ವರದಿ-ಕಾಶಿಬಾಯಿ ಸಿ ಗುತ್ತೇದಾರ.

Spread the love

Leave a Reply

Your email address will not be published. Required fields are marked *

error: Content is protected !!