ಮಾ. 29ಕ್ಕೆ ಬಸವ ಭವನ ನಿರ್ಮಾಣಕ್ಕಾಗಿ ಪೂರ್ವಭಾವಿ ಸಭೆ | ಚಿತ್ತಾಪುರದಲ್ಲಿ ಅತೀ ಶೀಘ್ರದಲ್ಲಿ ಬಸವ ನಿರ್ಮಾಣಕ್ಕೆ ಅಡಿಗಲ್ಲು: ನಾಗರೆಡ್ಡಿ ಪಾಟೀಲ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಬಸವ ಅಭಿಮಾನಿಗಳ ಬಹುದಿನಗಳ ಬೇಡಿಕೆಯಾಗಿದ್ದ ಬಸವ ಭವನ ನಿರ್ಮಾಣಕ್ಕೆ ಅತೀ ಶೀಘ್ರದಲ್ಲಿ ಅಡಿಗಲ್ಲು ನೆರವೇರಿಸಲಾಗುವುದು ಅದಕ್ಕಾಗಿ ಸಮಾಜದ ಹಿತ ಚಿಂತಕರ, ಅಭಿಮಾನಿಗಳ ಸಭೆಯನ್ನು ಮಾ. 29 ರಂದು ಬೆಳಗ್ಗೆ 10 ಗಂಟೆಗೆ ಬಸವ ಭವನ ನಿರ್ಮಾಣಕ್ಕಾಗಿ ನಿಗದಿಪಡಿಸಿದ ಸ್ಥಳದಲ್ಲಿ ಕರೆಯಲಾಗಿದೆ ಎಂದು ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.
ಪಟ್ಟಣದ ಅಣ್ಣಾರಾವ ಪಾಟೀಲ ಅಡತಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವ ನಿರ್ಮಾಣಕ್ಕಾಗಿ ಈಗಾಗಲೇ 2 ಎಕರೆ ಜಮೀನು ಖರೀದಿಯನ್ನು ಮಾಡಿದ್ದು ಕಂಪೌಂಡ್ ಗೊಡೆಯನ್ನು ಕಟ್ಟಲಾಗಿದೆ. ಸರ್ಕಾರದಿಂದ ಈಗಾಗಲೇ 50 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ದಾನಿಗಳ ಸಹಾಯದಿಂದ ಭವನ ಹಾಗೂ ವಸತಿ ನಿಲಯ ಕಾಮಗಾರಿ ಕೈಗೊಳ್ಳಲಾಗುವುದು. ಅಲ್ಲಿ ಬಸವ ಭವನದ ಜೊತೆ ಪದವಿ ಮತ್ತು ಪದವಿ ಪೂರ್ವ ಕಲಿಯುತ್ತಿರುವ 50 ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯವನ್ನು ನಿರ್ಮಾಣ ಮಾಡಲಾಗುತ್ತಿದ್ದು. ಬಸವ ಭವನದಲ್ಲಿ ಬರುವ ಆದಾಯದಲ್ಲಿ ವಸತಿ ನಿಲಯದ ನಿರ್ವಹಣೆಯನ್ನು ಮಾಡಲಾಗುವದು ಎಂದು ತಿಳಿಸಿದರು.
ಮಾ. 29 ರಂದು ಕರೆದಿರುವ ಪೂರ್ವಭಾವಿ ಸಭೆಗೆ ಸರ್ವರು ಬಂದು ಬಸವ ಭವನ ಮತ್ತು ವಸತಿ ನಿಲಯದ ಕುರಿತಾಗಿ ಸಲಹೆ ಸೂಚನೆಗಳನ್ನು ನೀಡಿ ಸಹಕಾರವನ್ನು ನೀಡಿದಲ್ಲಿ ಬರುವ ಬಸವ ಜಯಂತಿಯೊಳಗಾಗಿ ಅದನ್ನು ಪೂರ್ಣಗೊಳಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಡಾ.ಪ್ರಭುರಾಜ ಕಾಂತಾ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಮುಖಂಡರಾದ ಅಣ್ಣಾರಾವ ಪಾಟೀಲ ಮುಡಬೂಳ, ಅಶೋಕ ನಿಪ್ಪಾಣಿ, ಅನಿಲ್ ವಡ್ಡಡಗಿ ಇದ್ದರು.
