Oplus_0

ಡಿವೈಎಸ್ಪಿ ಶಂಕರಗೌಡ ಪಾಟೀಲ ತಂಡದಿಂದ ರೌಡಿಗಳ ಹೆಡೆಮುರಿ | ರೌಡಿಗಳ ಗುಂಡಾಗಿರಿಗೆ ಪೊಲೀಸರ ಬ್ರಹ್ಮಾಸ್ತ್ರ, ಚಿತ್ತಾಪುರದಲ್ಲಿ ಖಾಕಿ ಪಡೆಯಿಂದ ಬೆಳ್ಳಂಬೆಳಗ್ಗೆ ದಂಡಂ ದಶಗುಣಂ!

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದಲ್ಲಿ ತಾವೇ ‘ಡಾನ್’ಗಳೆಂದು ಮೆರೆಯುತ್ತಿದ್ದ ಕಿಡಿಗೇಡಿಗಳಿಗೆ ಸದ್ದಿಲ್ಲದೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಇನ್ಮುಂದೆ ಗಲ್ಲಿ ಗಲ್ಲಿಗಳಲ್ಲಿ ದಾದಾಗಿರಿ ನಡೆಸಿದರೆ ಅಟ್ಟಾಡಿಸಿ ಹೊಡೆಯುತ್ತೇವೆ ಎಂಬ ಖಡಕ್ ಸಂದೇಶವನ್ನು ಚಿತ್ತಾಪುರ ಮತ್ತು ವಾಡಿ ಪೊಲೀಸರು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಬೆಳ್ಳಂಬೆಳಗ್ಗೆ ಚಿತ್ತಾಪುರ ವೃತ್ತದ ರೌಡಿ ಶೀಟರ್‌ಗಳ ಮನೆಬಾಗಿಲಿಗೆ ಪೊಲೀಸರು ಲಗ್ಗೆ ಇಟ್ಟಿದ್ದಾರೆ. ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರ ಸಾರಥ್ಯದಲ್ಲಿ ನಡೆದ ಈ ಮಿಂಚಿನ ಕಾರ್ಯಾಚರಣೆ ಹೇಗಿತ್ತೆಂದರೆ, ಬಾಗಿಲು ತೆರೆದ ರೌಡಿಗಳು ಪೊಲೀಸರನ್ನು ಕಂಡು ಬೆಚ್ಚಿಬಿದ್ದಿದ್ದಾರೆ. 50ಕ್ಕೂ ಹೆಚ್ಚು ಹಳೆ ಕದೀಮರ ಮನೆಗಳನ್ನು ಇಂಚಿಂಚಾಗಿ ಜಾಲಾಡಿದ ಪೊಲೀಸರು, ಮಾರಕಾಸ್ತ್ರ ಮತ್ತು ಮಾದಕ ದ್ರವ್ಯಗಳಿಗಾಗಿ ಹದ್ದಿನ ಕಣ್ಣಿನಿಂದ ತಪಾಸಣೆ ನಡೆಸಿದರು.

ಸಾರ್ವಜನಿಕರ ನೆಮ್ಮದಿ ಕೆಡಿಸಿ, ಕಾನೂನು ಕೈಗೆತ್ತಿಕೊಂಡರೆ ನಿಮ್ಮ ಅಡ್ಡಾಗಳನ್ನು ಧೂಳೀಪಟ ಮಾಡುತ್ತೇವೆ ಎಂದು ಪೊಲೀಸರು ಈ ದಾಳಿಯ ಮೂಲಕ ನೇರ ಎಚ್ಚರಿಕೆ ನೀಡಿದ್ದಾರೆ. ಸಮಾಜಘಾತುಕ ಶಕ್ತಿಗಳ ಎಡೆಮುರಿ ಕಟ್ಟಲು ಖಾಕಿ ಪಡೆ ಈಗ ಫೀಲ್ಡಿಗಿಳಿದಿದ್ದು, ಅಕ್ರಮ ಚಟುವಟಿಕೆ ನಡೆಸುವವರ ಪಟ್ಟಿ ತಯಾರಿಸಿದೆ.

ವಾಡಿ ಮತ್ತು ಚಿತ್ತಾಪುರ ಠಾಣೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದ ಈ ಕಾರ್ಯಾಚರಣೆಯಲ್ಲಿ, ರೌಡಿಗಳ ಪ್ರತಿಯೊಂದು ಚಟುವಟಿಕೆಯ ಮೇಲೆ ಪೊಲೀಸರು ಈಗ ಹದ್ದಿನ ಕಣ್ಣಿಟ್ಟಿದ್ದಾರೆ. ಯಾರು ಎಲ್ಲಿಗೆ ಹೋಗುತ್ತಾರೆ? ಯಾರನ್ನು ಭೇಟಿಯಾಗುತ್ತಾರೆ? ಎಂಬ ಇಡೀ ರಿಪೋರ್ಟ್ ಈಗ ಪೊಲೀಸರ ಕೈಯಲ್ಲಿದೆ.

ರಸ್ತೆಯಲ್ಲಿ ತಲೆ ಎತ್ತಿ ಓಡಾಡಬೇಕಿರುವುದು ಜನಸಾಮಾನ್ಯರೇ ಹೊರತು ರೌಡಿಗಳಲ್ಲ. ಕಾನೂನಿಗೆ ಗೌರವ ಕೊಡದವರಿಗೆ ಪೊಲೀಸ್ ಲಾಠಿಯೇ ಉತ್ತರ ನೀಡಲಿದೆ ಎನ್ನುವ ಸಂದೇಶ ಈಗ ಇಡೀ ಚಿತ್ತಾಪುರ ವೃತ್ತದಲ್ಲಿ ಪ್ರತಿಧ್ವನಿಸುತ್ತಿದೆ.

ದಾಳಿಯಲ್ಲಿ ಚಿತ್ತಾಪುರ ಪಿಎಸ್ಐ ಮಂಜುನಾಥ ರೆಡ್ಡಿ, ವಾಡಿ ಪಿಎಸ್ಐ ತಿರುಮಲೇಶ್.ಕೆ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

“ಚಿತ್ತಾಪುರ ವೃತ್ತ ವ್ಯಾಪ್ತಿಯ ವಾಡಿ ಮತ್ತು ಚಿತ್ತಾಪುರ ಪೊಲೀಸ್ ಠಾಣೆಯ ಸರಹದ್ದುಗಳಲ್ಲಿನ ರೌಡಿ ಶೀಟರ್ ಹಾಗೂ ಪದೇ-ಪದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವ ಸುಮಾರು 50 ಕ್ಕೂ ಹೆಚ್ಚು ರೌಡಿ ಆಸಾಮಿಗಳ ಮನೆಗಳಿಗೆ ಆಕಸ್ಮಿಕವಾಗಿ ಪೊಲೀಸರು ಶೋಧನೆಗೋಸ್ಕರ ದಾಳಿ ಮಾಡಿ ಆ ಮನೆಗಳಲ್ಲಿ ಅಕ್ರಮವಾಗಿ ಇಟ್ಟಿರಬಹುದಾದ ಮಾರಕಾಸ್ತ್ರಗಳು ಹಾಗೂ ಮಾದಕ ದ್ರವ್ಯಗಳ ಬಗ್ಗೆ ಶೋಧನೆ ಮಾಡಿರುತ್ತಾರೆ ಹಾಗೂ ಈ ಎಲ್ಲಾ ರೌಡಿ ಹಾಗು ಅಪರಾಧ ಚಟುವಟಿಕೆ ಹಿನ್ನಲೆ ಇರುವ ಆಸಾಮಿಯವರಿಗೆ ಸದ್ವರ್ತನೆಯಿಂದ ಇರಲು ಎಚ್ಚರಿಕೆಯನ್ನು ನೀಡಿರುತ್ತಾರೆ. ಮತ್ತು ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡಿದಲ್ಲಿ ಅಂತವರ ವಿರುದ್ಧ ಕಠಿಣವಾದ ಕಾನೂನು ಕ್ರಮ ಜರುಗಿಸಲಾಗುತ್ತದೆ ಅಂತಾ ತಾಕೀತು ಮಾಡಿದ್ದಾರೆ.”-ಅಡ್ಡೂರು ಶ್ರೀನಿವಾಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಲಬುರಗಿ 

Spread the love

Leave a Reply

Your email address will not be published. Required fields are marked *

You missed

error: Content is protected !!