ಉಚಿತ ಕಾನೂನು ಅರಿವು ಕಾರ್ಯಾಗಾರ | ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶ್ರಮಿಸಿ: ನ್ಯಾಯಾಧೀಶ ಶ್ರೀನಿವಾಸ ನವಲೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನಗರ, ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಕುಟುಂಬಗಳು ತಮ್ಮ ಬಡತನದ ಕಾರಣಕ್ಕೆ ಅಪ್ರಾಪ್ತ ಮಕ್ಕಳನ್ನು ದುಡಿಯಲು ಕಳುಹಿಸಿ, ಬಾಲ ಕಾರ್ಮಿಕ ಪದ್ಧತಿಗೆ ದೂಡಲಾಗುತ್ತಿದೆ. ಅವರ ಬಾಲ್ಯವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರದ ಕಾರ್ಯದರ್ಶಿ ಮತ್ತು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಧೀಶ ಶ್ರೀನಿವಾಸ ನವಲೆ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯ ಕುರಿತು ತಾಲೂಕಿನ ಗ್ರಾ.ಪಂ.ಪಿಡಿಓಗಳಿಗೆ ಹಮ್ಮಿಕೊಂಡ ಒಂದು ದಿನದ ಉಚಿತ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವುದನ್ನು ಬಾಲ ಕಾರ್ಮಿಕ ಕಾಯ್ದೆ ನಿಷೇಧಿಸುತ್ತದೆ. 14 ರಿಂದ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಕೆಲಸಗಳಲ್ಲಿ ಬಳಸುವಂತಿಲ್ಲ. ಆದರೂ ಪಾಲಕರು ಬಡವರು ಎನ್ನುವ ಕಾರಣ ಕೊಟ್ಟು ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಮಾಡುತ್ತಿದ್ದಾರೆ. ಇಂತಹ ಕಾರಣ ಹೇಳುವ ತಂದೆ ತಾಯಿಗಳಿಗೆ ಇದರ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪಿಡಿಓಗಳಿಗೆ ಹೇಳಿದರು.
18 ವರ್ಷದೊಳಗಿನ ಹೆಣ್ಣು ಮಕ್ಕಳು ಮತ್ತು 21 ವರ್ಷದೊಳಗಿನ ಗಂಡು ಮಕ್ಕಳಿಗೆ ವಿವಾಹ ಮಾಡುವುದು ಕಾನೂನುಬಾಹಿರವಾಗಿದೆ. ಬಾಲ್ಯ ವಿವಾಹ ಮಾಡುವುದು, ಮಾಡಿಸುವುದು ಅಥವಾ ಪ್ರೇರೇಪಿಸುವುದು ಬಾಲ್ಯ ವಿವಾಹ ನಿಷೇಧ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹ ಕಂಡು ಬರುತ್ತಿವೆ. ಆದ್ದರಿಂದ ಬಾಲ್ಯ ವಿವಾಹ ಪಿಡಿಓಗಳ ಗಮನಕ್ಕೆ ತಕ್ಷಣ ಮಕ್ಕಳ ಹಕ್ಕುಗಳ ಆಯೋಗ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗಮನಕ್ಕೆ ತಂದು. ಅಧಿಕಾರಿಗಳ ಜೊತೆ ನಿಂತು, ಬಾಲ್ಯ ವಿವಾಹ ತಡೆಯಬೇಕು ಎಂದು ಪಿಡಿಓಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ತಾಪಂ ಮನರೇಗಾ ಸಹಾಯಕ ನಿರ್ದೇಶಕರಾದ ಪಂಡಿತ ಸಿಂದೆ, ಶ್ರೀಮಂತ ಸಂಗಾವಿ ಇದ್ದರು.

