ತೈಲ ಕೊರತೆ ವದಂತಿ: ಖರೀದಿಗೆ ಮುಗಿಬಿದ್ದ ಜನ, ಬಂಕ್ಗಳಲ್ಲಿ ಭಾರೀ ರಷ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ದೇಶದಲ್ಲಿ, ವಿಶೇಷವಾಗಿ ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಇಂಧನ (ಪೆಟ್ರೋಲ್/ಡೀಸೆಲ್) ಕೊರತೆಯ ಭೀತಿಯಿಂದಾಗಿ (ಅಗತ್ಯಕ್ಕಿಂತ ಹೆಚ್ಚು ಖರೀದಿಸುವುದು) ಹೆಚ್ಚಾಗಿದ್ದು, ಪೆಟ್ರೋಲ್ ಬಂಕ್ಗಳ ಮುಂದೆ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಚಿತ್ತಾಪುರ ಪಟ್ಟಣದಲ್ಲಿ ಶುಕ್ರವಾರ ಕಂಡುಬಂದವು.
ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಾಗಲಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಬೆನ್ನಲ್ಲೇ, ಜನರು ಮುಗಿಬಿದ್ದು ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಿಲ್ಲ ಎಂದು ಜಿಲ್ಲಾಧಿಕಾರಿಗಳು ಮತ್ತು ಸರ್ಕಾರ ಸ್ಪಷ್ಟಪಡಿಸಿದ್ದರೂ, ಆತಂಕದಿಂದ ಜನರು ಬಂಕ್ಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಮಧ್ಯಪ್ರಾಚ್ಯದಲ್ಲಿನ ಸಂಘರ್ಷಗಳಿಂದಾಗಿ ತೈಲ ದರದಲ್ಲಿ ಇನ್ನೂ ಏರಿಕೆಯಾಗಬಹುದು ಎಂಬ ಆತಂಕವೂ ಜನರಲ್ಲಿ ಹೆಚ್ಚಾಗಿದೆ. ಹೀಗಾಗಿ ಕೆಲವು ಕಡೆ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗೆ ಲಾರಿ, ಟ್ಯಾಂಕರ್ ಸೇರಿದಂತೆ ಇತರೆ ವಾಹನ ಸವಾರರು ಮುಗಿಬಿದ್ದ ದೃಶ್ಯ ಕಂಡು ಬಂತು.
ಪೆಟ್ರೋಲ್ ಡೀಸೆಲ್ ಕೊರತೆಯಿಂದಾಗಿ ಪೂರೈಕೆ ಮಾಡಲು ತೊಂದರೆ ಆಗುತ್ತಿದೆ. ಇದು ನಮ್ಮ ಸಮಸ್ಯೆ ಅಲ್ಲ ಸರ್ಕಾರದ ಮಟ್ಟದ ಸಮಸ್ಯೆ ಅಥವಾ ಸರ್ಕಾರದ ಪಾಲಿಸಿ ಆಗಿರಬಹುದು ಹೀಗಾಗಿ ಸಾರ್ವಜನಿಕರು ಸ್ವಲ್ಪ ತಾಳ್ಮೆಯಿಂದ ಇರಬೇಕು, ಇದು ತಾತ್ಕಾಲಿಕ ಸಮಸ್ಯೆ ಶೀಘ್ರದಲ್ಲೇ ಪರಿಹಾರ ಆಗಲಿದೆ ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಬಂಕ್ ಮಾಲಿಕರು ತಿಳಿಸಿದ್ದಾರೆ.

