ಜಿಲ್ಲೆಯಲ್ಲಿ ಪ್ರಜಾಪ್ರಭುತ್ವದ ಹೆಸರಲ್ಲಿ ನಿರಂಕುಶ ಆಡಳಿತ | ನೀಟ್ ಪರೀಕ್ಷೆ ಅಕ್ರಮ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಪ್ರಧಾನಿ ಮೋದಿ ತ್ವರಿತ ನ್ಯಾಯಾಲಯ ಸ್ಥಾಪನೆ: ರುದ್ರಯ್ಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನೀಟ್ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ 13 ಜನರನ್ನು ಬಂಧಿಸಿ ಜೈಲಲ್ಲಿ ಇಡಲಾಗಿದೆ ಹಾಗೂ ತ್ವರಿತ ನ್ಯಾಯಾಲಯ ಸ್ಥಾಪಿಸಿ ತಪ್ಪಿತಸ್ಥರನ್ನು ಕಠಿಣ ಶಿಕ್ಷೆ ನೀಡಲು ಪ್ರಧಾನಿ ಮೋದಿ ಅವರು ದಿಟ್ಟ ಕ್ರಮ ಕೈಗೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಆರ್.ರುದ್ರಯ್ಯ ಹೇಳಿದರು.
ಪಟ್ಟಣದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ ಇದು ಆಗಬಾರದಿತ್ತು, ಆದರೆ ಇದನ್ನೇ ಮುಂದಿಟ್ಟುಕೊಂಡು ಸಿಜೆಪಿ ಕೈಗೊಂಡ ಚಳುವಳಿಯಲ್ಲಿ ಕಾಂಗ್ರೆಸ್ ಹಾಗೂ ಬೇರೆ ಬೇರೆ ಸಂಘಟನೆಯವರು ಭಾಗವಹಿಸಿ ಹೋರಾಟದ ದಿಕ್ಕನ್ನೇ ತಪ್ಪಿಸಿ ಅಶಾಂತಿ ವಾತಾವರಣ ನಿರ್ಮಾಣ ಮಾಡಿರುವುದು ಖಂಡನಾರ್ಹ ಎಂದು ಹೇಳಿದರು.
ಯಾವುದೇ ಘಟನೆ ಜರುಗಿದಾಗ ನ್ಯಾಯಯುತವಾಗಿ ಹೋರಾಟ ಮಾಡಲಿ, ಆದರೆ ಅದಕ್ಕೆ ಸಂಬಂಧಪಟ್ಟ ಸಚಿವರ ರಾಜೀನಾಮೆಯಿಂದ ಎಲ್ಲವೂ ಬಗೆಹರಿಯುವುದಿಲ್ಲ. ಕಲಬುರಗಿ ಜಿಲ್ಲಾ ಕೇಂದ್ರ ಕಾರಾಗೃಹದಿಂದ ಮೂರು ಜನ ಆರೋಪಿಗಳು ಪರಾರಿಯಾಗಿದ್ದಾರೆ ಇದಕ್ಕೆ ಗೃಹ ಸಚಿವರು ರಾಜೀನಾಮೆ ನೀಡಿದ್ರಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ, ರಾಜ್ಯದಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಮೂರು ಬಾರಿ ಸೋರಿಕೆಯಾಗಿದೆ. ಆಗ ಇಂತಹ ದುರ್ಘಟನೆಗಳು ಆಗಿಲ್ಲ ಆದರೆ ಈಗ ಪ್ರಧಾನಿ ಮೋದಿ ಹಾಗೂ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಹೋರಾಟ ಮಾಡುತ್ತಿರುವ ಧೋರಣೆ ಖಂಡನೀಯ, ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದರೂ ಬೇರೆಯವರ ತಟ್ಟೆಯಲ್ಲಿ ನೋಣ ಬಿದ್ದಿದೆ ಎಂದು ಹೇಳುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ ಎಂದು ಕುಟುಕಿದರು.
ಚಿತ್ತಾಪುರ ಸೇರಿದಂತೆ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಿರಂಕುಶ ಆಡಳಿತ ನಡೆಯುತ್ತಿದೆ, ಮಾತಾಡೋದು ಸಂವಿಧಾನ ಮಾಡೋದು ಅಸಂವಿಧಾನಿಕ ಕೆಲಸ, ಪ್ರಶ್ನೆ ಮಾಡುವವರ ಮೇಲೆ ಕೇಸ್ ಹಾಕಿ ಬೆದರಿಸುವ ಕೆಲಸ ಸಚಿವ ಪ್ರಿಯಾಂಕ್ ಖರ್ಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಮಳೆಯಿಲ್ಲದೆ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ ಆದರೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ವಹಿಸಿಲ್ಲ, ರೈತರು ಸಾಕಷ್ಟು ತೊಂದರೆಯಲ್ಲಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಇದು ರೈತರ ಮೇಲಿನ ಕಾಳಜಿ ತೋರಿಸುತ್ತಿದೆ ಜಿಲ್ಲೆಯಲ್ಲಿ ಯಾರೂ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಮೇಯರ್ ವಿಶಾಲ್ ದರ್ಗಿ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸುರಕರ್, ಪುರಸಭೆ ಮಾಜಿ ಸದಸ್ಯರಾದ ಶಾಮಣ್ಣ ಮೇಧಾ, ದಶರಥ ದೊಡ್ಡಮನಿ, ಬಿಜೆಪಿ ನಗರ ಯುವ ಅಧ್ಯಕ್ಷ ಸಂಗಮೇಶ ಪಾಟೀಲ, ಮುಖಂಡರಾದ ಅಕ್ಕಮಹಾದೇವಿ ನಾಗೇಶ್, ರವಿ ಮದನಕರ್, ಬಂದೆಪ್ಪ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.
“ದೆಹಲಿಯಲ್ಲಿ ಯಾರೋ ಮಾಡಿದ ಹೋರಾಟದಲ್ಲಿ ಕಾಂಗ್ರೆಸ್ ಮುಖಂಡರು ಭಾಗಿಯಾಗಿ ತಮ್ಮ ಕಾಂಗ್ರೆಸ್ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ”.-ಆರ್.ರುದ್ರಯ್ಯ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು.

