ಐನಾಪುರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಚಿಂಚೋಳಿ: ತಾಲೂಕಿನ ಐನಾಪೂರ ಹೋಬಳಿಗೆ ಸರಕಾರದಿಂದ ಮಂಜೂರಿಯಾಗಿರುವ ಐನಾಪುರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಬೇಕೆಂದು ಆಗ್ರಹಿಸಿ ಐನಾಪುರ ಗ್ರಾಮದಲ್ಲಿ ಮಂಗಳವಾರ ರೈತಪರ ಸಂಘಟನೆಗಳು, ಐನಾಪುರ ಏತ ನೀರಾವರಿ ಯೋಜನೆ ಹೋರಾಟ ಸಮಿತಿ ಮುಖಂಡರು ಚಿಂಚೋಳಿ-ಚಿಟಗುಪ್ಪಾ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮುಲ್ಲಾಮಾರಿ ಏತ ನೀರಾವರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಾನಂದ ಮಾಲಿ ಪಾಟೀಲ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ತಾಲೂಕಿನಲ್ಲಿಯೇ ಐನಾಪುರ ವಲಯದಲ್ಲಿ ರೈತರು ನೀರಾವರಿ ಯೋಜನೆಯಿಂದ ವಂಚಿತರಾಗಿದ್ದಾರೆ. ರೈತರು ಕೇವಲ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುತ್ತಾರೆ. ತರಕಾರಿ ಬೆಳೆ, ಉಳ್ಳಾಗಡ್ಡಿ ಕಬ್ಬು, ಅರಶಿಣ, ಶುಂಠಿ, ಬಾಳೆಗಿಡ ಇನ್ನಿತರ ತೋಟಗಾರಿಕೆ ಬೆಳೆಗಳನ್ನು ಇಲ್ಲಿನ ರೈತರು ನೀರಿಲ್ಲದೇ ಬೆಳೆಯಲು ಸಾಧ್ಯವಾಗುತ್ತಿಲ್ಲ. ಮುಲ್ಲಾಮಾರಿ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹ ಇರುವುದರಿಂದ ಐನಾಪುರ ಏತ ನೀರಾವರಿ ಯೋಜನೆಗೆ ಸರಕಾರ ಈಗಾಗಲೇ 95 ಕೋಟಿ ಮಂಜೂರಿಗೊಳಿಸಿದೆ. ಆದರೆ ಕಾಮಗಾರಿಗೆ ಇನ್ನು ಚಾಲನೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಕಂದಾಯ ಇಲಾಖೆ ಕಂದಾಯ ನಿರೀಕ್ಷಕ ರವಿಕುಮಾರ ಪಾಟೀಲ, ಕರ್ನಾಟಕ ನೀರಾವರಿ ನಿಗಮದ ಎಇಇ ಅಮೃತ ಪವಾರ, ತಾಂತ್ರಿಕ ಅಭಿಯಂತರ ತ್ರಿಲೋಚನ ಅವರಿಗೆ ಸಲ್ಲಿಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ರೈತ ಸಂಘದ ಅಧ್ಯಕ್ಷ ವೀರಣ್ಣ ಗಂಗಾಣಿ, ಶಿವರಾಜ್ ಪಾಟೀಲ, ಧನರಾಜ ಸ್ವಾಮಿ, ಗೋಪಾಲ ಗಾರಂಪಳ್ಳಿ, ಜಾಪರಖಾನ್, ಮೋಹನ ಮೇಲಿನಕೇರಿ, ಮಸ್ತಾನ ಮುಲ್ಲಾ ಅಣ್ಣಪ್ಪ ಮುಣಜಿ, ರಾಮಣ್ಣ ನಾಟೀಕಾರ, ನಾಮದೇವ ಮಾಲು, ಸಾಯಬಣ್ಣ ಸಲಗರ, ಸಿದ್ದಿಕ ಅಲಿ, ಮಾಣಿಕ ನಾಯಕ, ದತ್ತು ಇಂಚುರ, ಶಾಮರಾವ್ ಕೋರವಾರ ಇನ್ನಿತರರಿದ್ದರು.

