ಫಿಲ್ಟರ್ ಬೆಡ್: ಡಾ.ಬಾಬುಜೀ ರವರ ನಾಮಫಲಕ ಹರಿದು ಅವಮಾನಿಸಿದ ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ನಗರದ ಫಿಲ್ಟರಬೆಡ್ ಆಶ್ರಯ ಕಾಲೋನಿಯಲ್ಲಿರುವ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ರವರ ನಾಮಫಲಕವನ್ನು ಹರಿದು ಅವಮಾನಿಸಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಡಾ.ಬಾಬು ಜಗಜೀವನರಾಮ್ ಜಿಲ್ಲಾ ಜಯಂತೋತ್ಸವ ಸಮಿತಿಯ ಮುಖಂಡರು ಸಹಾಯಕ ಪೋಲಿಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ಸುಮಾರು ವರ್ಷಗಳಿಂದ ಏಪ್ರಿಲ್ 5 ರಂದು ಡಾ. ಬಾಬು ಜಗಜೀವನರಾಮ್ ರವರ ಜನ್ಮದಿನದಂದು ಫಿಲ್ಟರ್ ಬೆಡ್ ಆಶ್ರಯ ಕಾಲೋನಿಯಲ್ಲಿರುವ ನಾಮಫಲಕಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಈ ಮಹಾಪುರುಷರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದೇವೆ. ಆದರೆ ಶನಿವಾರ ರಾತ್ರೋ ರಾತ್ರಿ ಕಿಡಿಗೇಡಿಗಳು ಮದ್ಯ ಸೇವಿಸಿ ಮಹಾ ಪುರುಷರ ನಾಮಫಲಕ ತೆರವುಗೊಳಿಸಿದ್ದಾರೆ. ಅಲ್ಲದೇ ಸ್ಥಳದಲ್ಲಿಯೇ ಮದ್ಯದ ಬಾಟಲಿಗಳನ್ನು ಒಡೆದು ಹಾಕಿ ಬಡಾವಣೆಯಲ್ಲಿ ಅಶಾಂತಿ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಡಾ.ಬಾಬು ಜಗಜೀವನ ರಾಮ್ ರವರ ನಾಮಫಲಕವನ್ನು ತೆರವುಗೊಳಿಸಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜಯಂತೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ದೊಡ್ಡಮನಿ, ಅನೀಲಕುಮಾರ ಬೆಳಕೇರಿ, ಮಂಜುನಾಥ ನಾಲವಾರಕರ್, ಮಲ್ಲಿಕಾರ್ಜುನ ಜಿನಕೇರಿ, ಗೋಪಾಲ ನಾಟೀಕಾರ, ಅರವಿಂದ ನಾಟೀಕಾರ, ಪ್ರಕಾಶ ಮಾಳಗೆ, ರಂಜೀತ ಮೂಲಿಮನಿ, ಪ್ರದೀಪ ಬಾಚನಳ್ಳಿ, ಅರ್ಜುನ ಕಾಳನೂರ, ಧರ್ಮರಾಜ ಶಾಹಪೂರಕರ್, ಲಖನ್ ಗುಲ್ಲಾಬಡಿ ಸೇರಿದಂತೆ ಮುಖಂಡರು ಇದ್ದರು.

