ಬೆಂಗಳೂರು ನ್ಯಾ.ನಾಗಮೋಹನ ದಾಸ್ ಜೊತೆ ಬಿಜೆಪಿ ನಿಯೋಗ ಚರ್ಚೆ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಸಂಸದ ಗೋವಿಂದ ಕಾರಜೋಳ ಮತ್ತು ಮಾಜಿ ಕೇಂದ್ರ ಸಚಿವ ಅನೇಕಲ್ ನಾರಾಯಣಸ್ವಾಮಿ ನೇತೃತ್ವದಲ್ಲಿ ಒಳಮೀಸಲಾತಿ ಹೋರಾಟಗಾರರ ಹಾಗೂ ಬಿಜೆಪಿ ನಿಯೋಗ ನ್ಯಾ.ನಾಗಮೋಹನದಾಸ್ ಅವರನ್ನು ಅವರ ಏಕ ಸದಸ್ಯ ಆಯೋಗದ ಕಚೇರಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿತು.
ಸುಪ್ರೀಂಕೋರ್ಟ್ ತೀರ್ಪಿನ ತರುವಾಯ ಒಳ ಮೀಸಲಾತಿ ಜಾರಿ ತ್ವರಿತವಾಗಿ ಆಗಬೇಕಾದ ಅಗತ್ಯ, ಆದಿ ಕರ್ನಾಟಕ, ಆದಿದ್ರಾವಿಡ ವಿಷಯದಲ್ಲಿನ ದತ್ತಾಂಶಗಳ ನಿಖರತೆ ಬಗ್ಗೆ ಹಲವು ಆಯಾಮದ ಚರ್ಚೆ ನಡೆಸಲಾಯಿತು. ನ್ಯಾ ನಾಗಮೋಹನ್ ದಾಸ್ ಅವರ ಶಿಫಾರಸಿನ ಅನ್ವಯ ಹಿಂದಿನ ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಮೀಸಲಾತಿಯನ್ನು ಹೆಚ್ಚಳ ಮಾಡಿರುವುದು ಮತ್ತು 2011ರ ಜನಗಣತಿಯ ದತ್ತಾಂಶಗಳ ಆಧಾರದಲ್ಲಿ ಮಾಧುಸ್ವಾಮಿ ವರದಿ ಮಾಡಿದ ವರ್ಗೀಕರಣದ ವಿವರಗಳನ್ನು ಸಮಿತಿಯ ಸದಸ್ಯರೂ ಆಗಿದ್ದ ಸಂಸದ ಮತ್ತು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ವಿವರಿಸಿದರು.
ಆದಿದ್ರಾವಿಡ, ಆದಿಕರ್ನಾಟಕ ಗೊಂದಲ ಸರಿಪಡಿಸಲು ಮಾಧುಸ್ವಾಮಿ ಸಮಿತಿ ತಾಲೂಕು, ಜಿಲ್ಲೆಗಳ ದತ್ತಾಂಶ ಬಳಸಿರುವ ವಿವರಗಳನ್ನು ಅನೇಕಲ್ ನಾರಾಯಣಸ್ವಾಮಿ ನೀಡಿದರು.
ಈ ನಿಯೋಗದಲ್ಲಿ ಒಳ ಮೀಸಲಾತಿ ಹೋರಾಟಗಾರರಾದ ಎಮ್.ಶಂಕರಪ್ಪ, ಬಳ್ಳಾರಿ ಹನುಮಂತಪ್ಪ, ರಾಯಚೂರಿನ ನರಸಪ್ಪ, ಬೀದರ ನ ಫನಾರ್ಂಡೀಸ್ ಹಿಪ್ಪಳಗಾವ್, ಮೈಸೂರಿನ ಡಾ. ಅನಂದಕುಮಾರ್, ಶಾಸಕರಾದ ದುರ್ಯೋಧನ ಐಹೊಳೆ, ಬಸವರಾಜ ಮತ್ತಿಮುಡ್, ಮಾಜಿ ಶಾಸಕ ಬಸವರಾಜ್ ಧಡೇಸುಗೂರು, ಬಿಜೆಪಿ ಪ್ರಮುಖರಾದ ಬಿ.ಹೆಚ್.ಅನಿಲ್ ಕುಮಾರ್, ಲಕ್ಷ್ಮಿನಾರಾಯಣ, ವೆಂಕಟೇಶ ದೊಡ್ಡೇರಿ, ಬಳ್ಳಾಹುಣ್ಸಿ ರಾಮಣ್ಣ, ಗವಿಸಿದ್ದಪ್ಪ ದ್ಯಾಮಣ್ಣನವರ್, ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಇದ್ದರು.
ನ್ಯಾ.ನಾಗಮೋಹನ್ ದಾಸ್ ಒಂದು ತಾಸು ನೆಡೆದ ಚರ್ಚೆಯಲ್ಲಿ ಭಾಗವಹಿಸಿ ತ್ವರಿತವಾಗಿ, ಸಮರ್ಪಕವಾಗಿ ವರದಿ ಸಿದ್ಧಪಡಿಸಿ ಮಾದಿಗ ಸಮಾಜಕ್ಕೆ ಮತ್ತು ಎಲ್ಲ ನೂರೊಂದು ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಭರವಸೆ ನೀಡಿದರು.