ಭೀಮ ನಡಿಗೆ ಪಥಸಂಚಲನ ಯಶಸ್ವಿ ಬಿಜೆಪಿ ಮುಖಂಡರಿಗೆ ಹತಾಶೆ | ಆರ್.ಎಸ್.ಎಸ್ ನವರು ನಕಲಿ ದೇಶಭಕ್ತರು ನಾವು ನಿಜವಾದ ದೇಶಭಕ್ತರು: ಹೊಸಮನಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಆರ್.ಎಸ್.ಎಸ್ ನವರು ಕೈಯಲ್ಲಿ ಬಡಗಿ ಹಿಡಿದು ಪಥ ಸಂಚಲನ ಮಾಡುವ ಮೂಲಕ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ, ಆದರೆ ನಾವು ಯಾವುದೇ ಮಾರಕಾಸ್ತ್ರ ಇಲ್ಲದೇ ಶಿಸ್ತುಬದ್ಧವಾಗಿ, ಶಾಂತಿಯುತವಾಗಿ ಐತಿಹಾಸಿಕ ಭೀಮ ನಡಿಗೆ ಪಥ ಸಂಚಲನ ಮಾಡಿದ್ದೇವೆ. ಆರ್.ಎಸ್.ಎಸ್ ನವರು ತ್ರೀವರ್ಣ ಧ್ವಜಗಳು ಹಿಡಿದಿಲ್ಲ ನಾವು ತ್ರೀವರ್ಣ ಧ್ವಜಗಳು ಹಿಡಿದು ಹಾಗೂ ಸಂವಿಧಾನ ಪೀಠಕೆ ಜೊತೆಗೆ ಎಲ್ಲಾ ಸಮಾಜಗಳ ಗುರುಗಳ ಭಾವಚಿತ್ರಗಳೊಂದಿಗೆ ಮೆರವಣಿಗೆ ಮಾಡಿದ್ದೇವೆ ಹೀಗಾಗಿ ಆರ್.ಎಸ್.ಎಸ್ ನವರು ನಕಲಿ ದೇಶಭಕ್ತರು ನಾವು ನಿಜವಾದ ದೇಶಭಕ್ತರು ಎಂದು ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಹೇಳಿದರು.
ಪಟ್ಟಣದ ಬುದ್ಧ ಮಂದಿರದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಮ ನಡಿಗೆ ಪಥಸಂಚಲನದಲ್ಲಿ ಅಂಬೇಡ್ಕರ್ ಅನುಯಾಯಿಗಳು ಹಾಗೂ 22 ಸಮಾಜಗಳ ಜನರು ಭಾಗವಹಿಸಿದ್ದರಿಂದ ಅಭೂತಪೂರ್ವ ಯಶಸ್ವಿಗೊಂಡಿದೆ, ಇದನ್ನು ಸಹಿಸಿಕೊಳ್ಳಲು ಆಗದ ಬಿಜೆಪಿ ಮುಖಂಡರು ಹತಾಶೆಗೊಂಡ ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ಭೀಮ ನಡಿಗೆ ಪಥಸಂಚಲನದಲ್ಲಿ ಸ್ವಯಂಪ್ರೇರಿತವಾಗಿ ಜನ ಬಂದಿದ್ದಾರೆ ಯಾರನ್ನೂ ಹಣ ನೀಡಿ ಕರೆಯಿಸಿಲ್ಲ ಎಂದು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.
ಸಂವಿಧಾನ ಸಮರ್ಪಣೆ ದಿನಾಚರಣೆಯ ನಿಮಿತ್ತ ಅರ್ಥಪೂರ್ಣ ಪಥ ಸಂಚಲನ ಹಾಗೂ ಸಂವಿಧಾನ ಸಮಾವೇಶ ಯಶಸ್ವಿಗೊಂಡಿದೆ ಹೀಗಾಗಿ ಸಂವಿಧಾನ ಮತ್ತು ರಾಷ್ಟ್ರಧ್ವಜಕ್ಕೆ ಗೌರವ ನೀಡದ ಬಿಜೆಪಿ ಅವರಿಂದ ಪಾಠ ಕಲಿಯಬೇಕಿಲ್ಲ ಅವರ ಉಪದೇಶವು ಬೇಕಾಗಿಲ್ಲ ಎಂದು ನೇರವಾಗಿ ಹೇಳಿದರು.
ಮಾದಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ ಮಾತನಾಡಿ, ಸಂವಿಧಾನ ಪರವಾಗಿ ಯಾರು ಇರುತ್ತಾರೆ ಅವರ ಪರ ಘೋಷಣೆ ಕೂಗುತ್ತೇವೆ ಅಷ್ಟೇ ಅಲ್ಲ ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಸಹ ಮಾಡುತ್ತೇವೆ. ಭೀಮ ನಡಿಗೆ ಪಥಸಂಚಲನದಲ್ಲಿ ಎಲ್ಲಾ ಸಮಾಜದವರು ಭಾಗವಹಿಸಿದ್ದರಿಂದ ಬಿಜೆಪಿ ಅವರಿಗೆ ಹೊಟ್ಟೆ ಕಿಚ್ಚು ಆಗಿದೆ ಹೀಗಾಗಿ ಹತಾಶೆಯಿಂದ ಹೇಳಿಕೆ ನೀಡಿದ್ದಾರೆ. ಪ್ರತಿ ವರ್ಷ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಮಾಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಬೆಣ್ಣೂರಕರ್, ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಬಂಜಾರ ಸಮಾಜದ ಅಧ್ಯಕ್ಷ ಭೀಮಸಿಂಗ ಚವ್ಹಾಣ, ಮುಸ್ಲಿಂ ಸಮಾಜದ ಅಧ್ಯಕ್ಷ ಎಂ.ಎ.ರಷೀದ್, ಮಹಾದೇವ ರಾಠೋಡ, ಮಲ್ಲಿಕಾರ್ಜುನ ಮುಡಬೂಳಕರ್, ಶರಣು ಡೋಣಗಾಂವ, ಜಗನ್ನಾಥ ಮುಡಬೂಳಕರ್, ಶರಣಪ್ಪ ಹೊನ್ನಪೂರ, ದೇವು ಯಾಬಾಳ ಇದ್ದರು.
“ಪ್ರಿಯಾಂಕ್ ಖರ್ಗೆ ಅವರು ಸಂವಿಧಾನದ ಪರ ಇದ್ದಾರೆ ಹೀಗಾಗಿ ಅವರ ಪರ ಘೋಷಣೆ ಕೂಗಿದ್ದೇವೆ, ಸಂವಿಧಾನ ವಿಷಯದಲ್ಲಿ ಬಿಜೆಪಿ ಮುಖಂಡರು ರಾಜಕೀಯ ಮಾಡುವುದನ್ನು ಬಿಟ್ಟುಬಿಡಿ”.-ಮಲ್ಲಪ್ಪ ಹೊಸಮನಿ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷರು.

