ಬೆಳೆ ಪರಿಹಾರ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ತೆಂಗಳಿ ರೈತರಿಂದ ತಹಸೀಲ್ದಾರ್ ಗೆ ಮನವಿ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ತಾಲೂಕಿನ ತೆಂಗಳಿ ಗ್ರಾಮದ ನೂರಾರು ರೈತರಿಗೆ ಬೆಳೆ ಪರಿಹಾರ ಬರದೇ ಇರುವುದನ್ನು ಪರಿಶೀಲಿಸಿ ಕೂಡಲೇ ಬೆಳೆ ಪರಿಹಾರ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ತೆಂಗಳಿ ಗ್ರಾಮದ ರೈತರು ಕಾಳಗಿ ತಹಸೀಲ್ದಾರ್ ಪೃಥ್ವಿರಾಜ್ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಓಂಪ್ರಕಾಶ ಹೆಬ್ಬಾಳ ತೆಂಗಳಿ ಮಾತನಾಡಿ, ತೆಂಗಳಿ ಗ್ರಾಮದ ನೂರಾರು ರೈತರ ಖಾತೆಗೆ, ಸರ್ಕಾರದ ಬೆಳೆ ಪರಿಹಾರ ಜಮೆ ಆಗಿಲ್ಲ, ಸಂಬಂಧಪಟ್ಟ ಅಧಿಕಾರಿಗಳಿಗೆ ವಿಚಾರಿಸಿದರೆ ತಾಂತ್ರಿಕ ದೋಷದಿಂದ ಪರಿಹಾರ ಜಮೆ ಆಗಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ, ಅಲ್ಲದೆ ಸುಳ್ಳು ಮಾಹಿತಿ ನೀಡಿ ರೈತರಿಗೆ ವಂಚಿಸಿರುವುದು ಖಂಡನೀಯ. ಕುಲಂಕುಶವಾಗಿ ಪರಿಶೀಲಿಸಿ ಬೆಳೆ ಪರಿಹಾರವನ್ನು ಬರದೇ ಇರುವ ರೈತರ ಖಾತೆಗೆ ಸರ್ಕಾರದ ಬೆಳೆ ಪರಿಹಾರವನ್ನು ತಕ್ಷಣವೇ ಹಾಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇತ್ತೀಚಿಗೆ ರಾಜ್ಯ ಸರ್ಕಾರದಿಂದ ಬೆಳೆ ಹಾನಿ ಪರಿಹಾರದ ಮೊದಲನೇ ಕಂತು ಮತ್ತು ಎರಡನೇ ಕಂತು ಬಿಡುಗಡೆಯಾಗಿದೆ ಅದಕ್ಕೆ ನಾವು ಸರ್ಕಾರಕ್ಕೆ ಧನ್ಯವಾದಗಳು ತಿಳಿಸುತ್ತೇವೆ. ಆದರೆ ಇನ್ನೂ ಕೆಲವು ಗ್ರಾಮಗಳಲ್ಲಿ ಕೆಲವು ರೈತರ ಹೊಲಗಳು ನೋಂದಣಿಯಾಗದೇ ಅವರಿಗೆ ಮೊದಲ ಕಂತಾಗಲಿ ಅಥವಾ ಎರಡನೇ ಕಂತಾಗಲಿ ಪರಿಹಾರ ಬಿಡುಗಡೆಯಾಗಿರುವುದಿಲ್ಲ, ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ರೇವಣಸಿದ್ದಪ್ಪ ಬೂಯ್ಯಾರ, ಕಾಶಿನಾಥ್ ಕಾಮರೆಡ್ಡಿ, ಹನುಮಂತ ರಾವ್ ಬಾಳದೆ, ಅಣವೀರಪ್ಪ ಹಾವಶೆಟ್ಟಿ, ನಾಗರಾಜ್ ಮನ್ನಾಪುರ್, ನರ್ಸಿಂಗ್ ,ಯಶವಂತರಾಯ ,ಅಮೃತ್, ಶಿವರಾಜ್, ಚಂದ್ರಾಮ್ ರಾಥೋಡ್, ವೀರಯ್ಯಸ್ವಾಮಿ, ವಿಜಯಕುಮಾರ್ ಕೋಣಿನ್, ರೇವಣಸಿದ್ದಪ್ಪ ಕೋಣೀನ್, ರುದ್ರಯ್ಯ ಸ್ವಾಮಿ, ಅಣ್ಣಾರಾವ್ ಬಸ್ತೆ ಸೇರಿದಂತೆ ಇತರರು ಇದ್ದರು.

