Oplus_0

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ | ಕನಸು ನನಸಾಗಿಸಲು ನಿರಂತರ ಶ್ರಮ ಅಗತ್ಯ: ಶೇರಿಕಾರ

ನಾಗಾವಿ ಎಕ್ಸಪ್ರೆಸ್ 

ಚಿಂಚೋಳಿ: ನೀವು ಇಂದು ವಿದ್ಯಾರ್ಥಿ ಜೀವನದ ಬಹುಮುಖ್ಯ ತಿರುವಿನಲ್ಲಿದ್ದೀರಿ. ನೀವು ಯಾವುದೇ ಕ್ಷೇತ್ರ ಆಯ್ದುಕೊಂಡರೂ ಕೂಡ ನಿಮ್ಮ ಕನಸು ದೊಡ್ಡದಾಗಿರಲಿ. ಅದನ್ನು ನನಸು ಮಾಡಲು ನಿರಂತರ ಶ್ರಮ ಅಗತ್ಯ ಎಂದು ಪತ್ರಕರ್ತ ಜಗನ್ನಾಥ ಡಿ. ಶೇರಿಕಾರ ತಿಳಿಸಿದರು.

ಪಟ್ಟಣದ ವೀರೇಂದ್ರ ಪಾಟೀಲ ಎಜುಕೇಶನ್ ಟ್ರಸ್ಟನ‌ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶುಭ ಕೋರುವ (ಬೀಳ್ಕೊಡುವ) ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಜ್ಞಾನ‌ ಮತ್ತು ಪ್ರಚಾರ ಜಗತ್ತನ್ನು ಆಳುತ್ತಿವೆ. ವಿದ್ಯಾರ್ಥಿಗಳು ಪ್ರಚಾರದ ಹಿಂದೆ ಬಿದ್ದು ಸಾಮಾಜಿಕ‌ ಮಾಧ್ಯಮಗಳಲ್ಲಿ ಕಾಲ‌ ಕಳೆದು ಸಮಯ ವ್ಯರ್ಥ ಮಾಡದೇ ಜ್ಞಾನಾರ್ಜನೆಗೆ ಒತ್ತು ನೀಡಬೇಕು. ಜ್ಞಾನದಿಂದ ನಿಮ್ಮ‌ ಭವಿಷ್ಯ ಉಜ್ವಲಗೊಳ್ಳಲಿದೆ ಎಂದರು.

ನಮ್ಮಲ್ಲಿ ಉತ್ಸಾಹ ಹೆಚ್ಚಾಗಿರಬೇಕು ಅದು ಕೊನೆಯವರೆಗೂ ಇರಬೇಕು. ಉದ್ಯೋಗ ಬಯಸಿ ಅರ್ಜಿ ಸಲ್ಲಿಸುವಾಗ ಇರುವ ಉತ್ಸಾಹ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಾಗ ಇರದು. ಇದಕ್ಕೆ ಶುಕ್ರವಾರ ಪ್ರಕಟವಾದ ಯುಪಿಎಸ್ ಸಿ ಪರೀಕ್ಷೆ ಫಲಿತಾಂಶ ನಿದರ್ಶನವಾಗಿದೆ ಎಂದರು. 937876 ಜನ ಅರ್ಜಿ ಸಲ್ಲಿಸಿದರೆ ಪರೀಕ್ಷೆ ಬರೆದವರು 576793 ಜನ, ಕೊನೆಗೆ ಆಯ್ಕೆಯಾದವರು 958 ಜನ ಎಂದರು.

ಅಧ್ಯಕ್ಷತೆ ವಹಿಸಿದ್ದ ವೀರೇಂದ್ರ ಪಾಟೀಲ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಬಸವರಾಜ ಮಾಲಿ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿನಿ ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್ ಗಳಿಸಿದ್ದಾಳೆ. ನಮ್ಮ‌ ಶಾಲೆ ಆರಂಭವಾದಾಗಿನಿಂದ ತಾಲೂಕಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಮೂಲಕ ಉತ್ತಮ‌ ಫಲಿತಾಂಶದಿಂದ ಹೆಸರು ಮಾಡಿದೆ ಎಂದು ತಿಳಿಸಿದರು.

ನಮ್ಮ ಸಂಸ್ಥೆಯ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿ ನಮ್ಮ ಸಂಸ್ಥೆಯ ಪಿಯು ವಿಜ್ಞಾನ ಕಾಲೇಜಿನಲ್ಲಿ ಪ್ರವೇಶ ಪಡೆದರೆ ಅವರಿಗೆ ರೂ. 5 ಸಾವಿರ ಶುಲ್ಕದಲ್ಲಿ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಘೋಷಿಸಿದರು.

ಮುಖ್ಯ ಶಿಕ್ಷಕ‌ ವಿಶ್ವನಾಥ ನಾಯಿನೂರು, ವೀರೇಂದ್ರ ಪಾಟೀಲ ಪಿಯು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ ಪಾಟೀಲ, ಸಂಸ್ಥೆಯ ಸಲಹೆಗಾರರಾದ ಅಬ್ರಾಹಂ ಅವರು ಮಾತನಾಡಿದರು. ವಿದ್ಯಾರ್ಥಿನಿಯರಾದ ತಸ್ಮಿಯಾ, ನಬಿಯಾ, ಪ್ರಿಯಾಂಕಾ, ಶೀತಲ್, ಸುಕನ್ಯಾ ಅನುಭವ ಹಂಚಿಕೊಂಡರು.

ಭಾಗ್ಯಶ್ರೀ ಸ್ವಾಗತಿಸಿದರು, ದೇವಿಕಾ ನಿರೂಪಿಸಿದರು, ಅನುರಾಧಾ ವಂದಿಸಿದರು. ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ‌ ಕಾರ್ಯಕ್ರಮಗಳು ನಡೆದವು.

Spread the love

Leave a Reply

Your email address will not be published. Required fields are marked *

error: Content is protected !!