Oplus_0

ಸಾರ್ವಜನಿಕರಿಗೆ ಉಪಯೋಗವಾಗದ ಶೌಚಾಲಯಗಳು | ಚಿತ್ತಾಪುರ ಅಭಿವೃದ್ಧಿ ಕುಂಠಿತ ಪುರಸಭೆ ಬಿಜೆಪಿ ಮಾಜಿ ಸದಸ್ಯರ ಆರೋಪ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪುರಸಭೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಪುರಸಭೆ ಮಾಜಿ ಸದಸ್ಯ ಶಾಮಣ್ಣ ಮೇಧಾ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವೈಯಕ್ತಿಕ ಸ್ವಾರ್ಥಕ್ಕಾಗಿ ಗುಣಮಟ್ಟದ ಕಾಮಗಾರಿಯಲ್ಲಿ ರಾಜೀ ಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಪಟ್ಟಣದ ರೈಲ್ವೆ ನಿಲ್ದಾಣ ದಿಂದ ನಾಗಾವಿ ವೃತ್ತದ ರಸ್ತೆ, ಕಾಶಿ ಗಲ್ಲಿಯ ಗಣೇಶ ಮಂದಿರದಿಂದ ಬಸ್ ನಿಲ್ದಾಣ ರಸ್ತೆ ಕೆಲವೇ ತಿಂಗಳಲ್ಲಿ ಹದಗೆಟ್ಟು ಸಂಪೂರ್ಣ ಹಾಳಾಗಿದೆ. ಕೆನರಾ ಬ್ಯಾಂಕ್ ಎದುರಿನ ಪುರಸಭೆ ವಾಣಿಜ್ಯ ಮಳಿಗೆ, ಚಿತ್ತಾವಲಿ ವೃತ್ತದ ವಾಣಿಜ್ಯ ಮಳಿಗೆ, ತರಕಾರಿ ಮಾರಾಟ ಮಳಿಗೆ, ಕನ್ನಡ ಭವನ ಸಾರ್ವಜನಿಕರಿಗೆ ಉಪಯೋಗವಾಗುತ್ತಿಲ್ಲ ಎಂದು ದೂರಿದರು.

ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ನೀಲನಕ್ಷೆ ಸಿದ್ದವಾಗಿದೆ ಎಂದು ಕಳೆದ 15 ವರ್ಷಗಳಿಂದ ಹೇಳುತ್ತಾ ಬರಲಾಗಿದೆ ಆದರೆ ಇಲ್ಲಿವರೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ. ದೇವಸ್ಥಾನದ ಹತ್ತಿರ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಇಲ್ಲದೇ ಇರುವುದರಿಂದ ಭಕ್ತಾದಿಗಳು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕೂಡಲೇ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದಲ್ಲಿ ದೊಡ್ಡದಾದ ಸರ್ಕಾರಿ ಕನ್ಯಾ ಪ್ರಾಥಮಿಕ ಮತ್ತು ಪ್ರೌಢ ಶಾಲೆ ನಿರ್ಮಾಣ ಮಾಡಲಾಗಿದೆ ಆದರೆ ಶಾಲೆಯ ಸ್ವಚ್ಛತೆ ಮಾಡಲು ಯಾವೊಬ್ಬ ಪ್ಯೂನ್ ಇಲ್ಲ ಹೀಗಾಗಿ ಮಕ್ಕಳಿಂದಲೇ ಸ್ವಚ್ಛತೆ ಮಾಡಿಸುತ್ತಿದ್ದಾರೆ. ಶಾಲೆಯಲ್ಲಿ ಕುಡಿಯುವ ನೀರು ಇಲ್ಲದೇ ಇರುವುದರಿಂದ ಮಕ್ಕಳು ಪರದಾಡುತ್ತಿದ್ದಾರೆ ಆದ್ದರಿಂದ ಕೂಡಲೇ ಶಾಲಾ ಸ್ವಚ್ಛತೆಗೆ ಡಿ ಗ್ರೂಪ್ ನೌಕರರನ್ನು ನಿಯೋಜಿಸಬೇಕು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸುರಕರ್ ಮಾತನಾಡಿ, ಪಟ್ಟಣದ ಬಾಹರಪೇಟ್ ಹರಿಜನವಾಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಚ್ಚುವ ಹಂತಕ್ಕೆ ತಲುಪಿದೆ ಹೀಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಪುರಸಭೆ ಮಾಜಿ ಸದಸ್ಯ ರಮೇಶ್ ಬೊಮ್ಮನಳ್ಳಿ ಮಾತನಾಡಿ, ಪುರಸಭೆ ವತಿಯಿಂದ ನಾಲ್ಕು ಶೌಚಾಲಯಗಳು ಮಂಜೂರಾಗಿ ಅನುದಾನ ಬಿಡುಗಡೆ ಆದರೂ ಸಹ ಇಲ್ಲಿವರೆಗೆ ನಿರ್ಮಾಣ ಆಗಿಲ್ಲ, ತಾಪಂ ಕಚೇರಿ ಎದುರುಗಡೆ, ರೈಲ್ವೆ ಸ್ಟೇಷನ್ ಎದುರುಗಡೆ ಇನ್ಧೂ ಕೆಲವು ಕಡೆ ನಿರ್ಮಾಣವಾಗಿವೆ ಆದರೆ ಅವುಗಳ ಸದುಪಯೋಗ ಸಾರ್ವಜನಿಕರಿಗೆ ಆಗುತ್ತಿಲ್ಲ ಎಂದು ಆರೋಪಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!