ಟಿಎಪಿಸಿಎಂಎಸ್ ವತಿಯಿಂದ ಸಹಕಾರ ಸಪ್ತಾಹ ಆಚರಣೆ | ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಅರಣಕಲ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನಾವು ಪರಿಸರ ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂಬುದನ್ನು ಮರೆಯಬಾರದು. ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು ಎಂದು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ದೇವಿಂದ್ರ ಅರಣಕಲ್ ಹೇಳಿದರು.
ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ವತಿಯಿಂದ ಸೋಮವಾರ ಕಚೇರಿ ಹತ್ತಿರ ಹಮ್ಮಿಕೊಂಡಿದ್ದ ಕೇಂದ್ರ ಸಹಕಾರ ಸಚಿವಾಲಯ 5 ವರ್ಷ ಪೂರೈಸುತ್ತಿರುವ ನಿಮಿತ್ತ ಸಹಕಾರ ಸಪ್ತಾಹ ಆಚರಣೆ, ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಹಕಾರ ಸಪ್ತಾಹದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಆರೋಗ್ಯಕರ ಬದುಕನ್ನು ನಡೆಸಲು ಉತ್ತಮ ಜೀವನ ಶೈಲಿಯೊಂದಿಗೆ ಸ್ವಚ್ಚ ಹಾಗೂ ಉತ್ತಮ ಪರಿಸರ ಅತಿ ಅಗತ್ಯವಾಗಿದ್ದು, ಅದಕ್ಕಾಗಿ ನಾವು ಮರ ಗಿಡಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ಮೂಲಕ ಪ್ರಕೃತಿಗೆ ನಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು.
ಕೃಷಿ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರೆ ಮಾತನಾಡಿ, ಗಿಡಮರಗಳನ್ನು ಉಳಿಸಿ ಬೆಳೆಸಿದಾಗ ಉತ್ತಮ ಮಳೆ ಆಗಲಿದೆ ಆಗ ಉತ್ತಮ ಬೆಳೆ ಸಿಗಲಿದೆ ಇದರಿಂದ ರೈತರ ಬದುಕು ಹಸನಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಸಸಿ ನೆಡುವುದರ ಜೊತೆಗೆ ಅವುಗಳ ಪಾಲನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಅಶೋಕ ಹರನಾಳ ವಾಡಿ, ನಿರ್ದೇಶಕ ರಾಚಣ್ಣ ಬೊಮ್ಮನಳ್ಳಿ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ರೈತ ಸಂಘದ ಅಧ್ಯಕ್ಷ ಶಾಮರಾಯ ಸಂಗಾವಿ, ಮುಖಂಡರಾದ ಶಿವಮೂರ್ತಿ ಯರಗಲ್, ನಾಗೇಂದ್ರ ಬುರ್ಲಿ, ಬಸವರಾಜ ಚಿನ್ನಮಳ್ಳಿ, ಸಿದ್ದು ಟೈಪಿಸ್ಟ್, ಕಾರ್ಯದರ್ಶಿ ಸಂಗನಬಸವ ಸೇರಿದಂತೆ ಇತರರು ಇದ್ದರು.

