ಚಿತ್ತಾಪುರದಲ್ಲಿ ರಾಷ್ಟ್ರೀಯ ಗೋರ್ ಸೇನೆಯ ಯುವ ಘರ್ಜನೆ ಪಥ ಸಂಚಲನ ಯಶಸ್ವಿ | ಶಿಕ್ಷಣದಿಂದ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ: ಸುಭಾಷ್ ರಾಠೋಡ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಮಾಜದಲ್ಲಿ ಶಾಂತಿ, ಭಕ್ತಿ, ಸಂಸ್ಕಾರ ಹಾಗೂ ಅಕ್ಷರ ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಪ್ರತಿಯೊಂದು ಕುಟುಂಬವೂ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಈ ನಿಟ್ಟಿನಲ್ಲಿ ಶಿಕ್ಷಣದಿಂದ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ತಾಂಡಾ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಸುಭಾಷ್ ರಾಠೋಡ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಗೋರ್ ಸೇನೆಯ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಯುವ ಗರ್ಜನೆ ಸಮಾವೇಶದಲ್ಲಿ ಮಾತನಾಡಿದ ಅವರು, ಬಂಜಾರಾ ಸಮಾಜವು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಸಮಾಜದ ಪ್ರತಿಯೊಬ್ಬರಲ್ಲೂ ಸಂವಿಧಾನದ ಅರಿವು ಮೂಡಬೇಕು, ಯುವಕರು ದುಶ್ಚಟಗಳಿಂದ ದೂರವಿದ್ದು, ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಸದೃಢ ಸಮಾಜ ನಿರ್ಮಾಣವಾದಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದು ಮಹತ್ವದ ಸಂದೇಶ ನೀಡಿದರು.
ಸಮಾಜದಲ್ಲಿ ಶಾಂತಿ, ಭಕ್ತಿ, ಸಹೋದರತ್ವ ಹಾಗೂ ಶಿಕ್ಷಣದ ಜಾಗೃತಿ ಮೂಡಿಸುವುದರ ಜೊತೆಗೆ ವರದಕ್ಷಣೆ ಪದ್ಧತಿಯ ನಿರ್ಮೂಲನೆ, ವ್ಯಸನಮುಕ್ತ ಸಮಾಜ ನಿರ್ಮಾಣ, ಯುವಕರಲ್ಲಿ ಸಂವಿಧಾನದ ಅರಿವು ಮೂಡಿಸುವುದು ಹಾಗೂ ಸಮಾಜದ ಮೇಲೆ ನಡೆಯುತ್ತಿರುವ ಅನ್ಯಾಯ, ಶೋಷಣೆ ಮತ್ತು ದೌರ್ಜನ್ಯಗಳ ವಿರುದ್ಧ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ಗುರುಗಳಾದ ಜೇಮಸಿಂಗ್ ಮಹಾರಾಜರು, ಬಳೀರಾಮ್ ಮಹಾರಾಜ್, ವಿಠ್ಠಲ್ ಮಹಾರಾಜರು ಹಾಗೂ ಸಾವಿತ್ರಿ ದೇವಿಯವರು ದಿವ್ಯ ಸಾನಿಧ್ಯ ವಹಿಸಿದ್ದರು. ವೇದಿಕೆ ಕಾರ್ಯಕ್ರಮ ನಡೆಯುತ್ತಿರುವಾಗಲೇ ಮಳೆ ಸುರಿಯುತ್ತಿದ್ದರೂ ಸಹ, ಪೂಜ್ಯರು, ಗಣ್ಯರು ಹಾಗೂ ಜನರು ಮಾತ್ರ ಸ್ಥಳದಿಂದ ಕದಲಿಲ್ಲ ಇದು ವಿಶೇಷವಾಗಿ ಕಂಡುಬಂತು. ಮಳೆ ಬಂದಿರುವುದು ನೋಡಿ ಅನೇಕರು ಸಂತಸಪಟ್ಟರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ಬಾಲಾಸಾಹೇಬ ರಾಠೋಡ ಅವರ ಸಮ್ಮುಖದಲ್ಲಿ ಬಂಜಾರಾ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಸಮಾಜದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳಾದ ಸಮುದಾಯದ ಸಂಪ್ರದಾಯದಂತೆ ವಿವಾಹವಾಗುವ ಯುವಕ-ಯುವತಿಯರಿಗೆ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ಪ್ರೋತ್ಸಾಹಧನ ಅಥವಾ ಪ್ರಶಸ್ತಿ ನೀಡಬೇಕು, ರಾಜ್ಯದ ಸುಮಾರು 3,600 ತಾಂಡಾಗಳಲ್ಲಿ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರಿಗೆ ಸರ್ಕಾರದಿಂದ ಆರ್ಥಿಕ ಸಹಾಯಧನ ನೀಡಬೇಕು, ಪ್ರತಿಯೊಂದು ತಾಂಡಾದಲ್ಲಿಯೂ ಯುವಕರ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಗ್ರಂಥಾಲಯಗಳನ್ನು ಸ್ಥಾಪಿಸಬೇಕು, ಆಗಿರುವ ಅನ್ಯಾಯ ರಾಷ್ಟ್ರ ಬಿಂದುವನ್ನು ಸರಿಪಡಿಸುವ ಸರಿಪಡಿಸಿ ಸಮಾಜಕ್ಕೆ ನ್ಯಾಯ ಕೊಡಿಸಬೇಕು ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಭಾಷ್ ರಾಠೋಡ ಅವರ ಮುಂದಿಟ್ಟರು.
ಈ ಬೇಡಿಕೆಗಳನ್ನು ಆಲಿಸಿದ ಸುಭಾಷ್ ರಾಠೋಡ್ ಅವರು ಸಮಾಜದ ಈ ಪ್ರಮುಖ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗೋರ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಬಾಲಾಸಾಹೇಬ ರಾಠೋಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೆಹರು ಜಾಠೋತ್, ರಾಜ್ಯಾಧ್ಯಕ್ಷ ರವಿ ಕಾರಬಾರಿ, ಜಿಪಂ ಮಾಜಿ ಸದಸ್ಯ ಅರವಿಂದ್ ಚವ್ಹಾಣ, ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ತಾಪಂ ಮಾಜಿ ಸದಸ್ಯ ನಾಮದೇವ್ ರಾಠೋಡ, ರಾಜು ಪವಾರ್, ಗೋಪಾಲ್ ರಾಠೋಡ, ರಮೇಶ್ ಕಾರಬಾರಿ, ವಿಠ್ಠಲ್ ವಾಲ್ಮೀಕಿ ನಾಯಕ, ಪೋಮಾ ರಾಠೋಡ, ತುಕಾರಾಮ್ ನಾಯಕ, ದೇವಿದಾಸ್ ನಾಯಕ, ಕಿಶನ್ ನಾಯಕ, ಕಿರಣ್ ನಾಯಕ, ಲಕ್ಷ್ಮಣ ನಾಯಕ, ಚಂದು ನಾಯಕ, ರಾಜು ರಾಠೋಡ, ಕುಮಾರ್ ಚವ್ಹಾಣ, ಶ್ರೀಕಾಂತ್ ರಾಠೋಡ, ಗಣೇಶ್ ಚವ್ಹಾಣ, ರವಿ ಜಾಧವ, ಅನಿಲ್ ಚವ್ಹಾಣ, ಹರಿಶ್ಚಂದ್ರ ಚವ್ಹಾಣ, ದೇವಿದಾಶ್ ಚವ್ಹಾಣ, ಆನಂದ್ ಜಾಧವ, ಸಿದ್ರಾಮ್ ರಾಠೋಡ, ಶರಣಕುಮಾರ್ ನಾಲವಾರ, ರಾಮ ವಾಡಿ, ಕುಮಾರ್ ತರೀತಾಂಡಾ, ನೆಹರು ಬೆಳಗೇರಾ ಸೇರಿದಂತೆ ಚಿತ್ತಾಪುರ ತಾಲೂಕಿನ ವಿವಿಧ ತಾಂಡಾಗಳ ನಾಯಕರು, ಸಮಾಜದ ಮುಖಂಡರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು.
ಜಗದೀಶ್ ಚವ್ಹಾಣ ಮತ್ತು ಮನೋಜ್ ರಾಠೋಡ ಅವರು ನಿರೂಪಿಸಿದರು, ಆಕಾಶ್ ಚವ್ಹಾಣ ಸ್ವಾಗತಿಸಿದರು, ತಾಲೂಕು ಅಧ್ಯಕ್ಷ ವಿಜಯಕುಮಾರ್ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು, ವರ್ಷಾಬಾಯಿ ಅಶ್ವಥ್ ರಾಠೋಡ ಸಂವಿಧಾನ ಪೀಠಿಕೆ ಓದಿದರು.
ಒಟ್ಟಾರೆಯಾಗಿ, ಚಿತ್ತಾಪುರದಲ್ಲಿ ನಡೆದ ಯುವ ಗರ್ಜನೆ ಕಾರ್ಯಕ್ರಮವು ಬಂಜಾರಾ ಸಮಾಜದ ಐಕ್ಯತೆ, ಯುವಶಕ್ತಿಯ ಸಂಘಟನೆ, ಶಿಕ್ಷಣದ ಮಹತ್ವ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಹಾಗೂ ಸಾಮಾಜಿಕ ಬದಲಾವಣೆಯ ಸಂಕಲ್ಪವನ್ನು ಸಾರಿದ ಐತಿಹಾಸಿಕ ಕಾರ್ಯಕ್ರಮವಾಗಿ ಗಮನ ಸೆಳೆಯಿತು.
ಯುವ ಘರ್ಜನೆ ಆಕರ್ಷಕ ಪಥ ಸಂಚಲನ:
ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಯುವ ಘರ್ಜನೆ ಪಥ ಸಂಚಲನ, ಲಾಡ್ಜಿಂಗ್ ಕ್ರಾಸ್, ಕೋರ್ಟ್ ರಸ್ತೆ, ಹೋಳಿಕಟ್ಟಾ ರಸ್ತೆ, ಚಿತ್ತಾವಲಿ ವೃತ್ತ, ಕಪ್ಪಡಾ ಬಜಾರ್, ಜನತಾ ವೃತ್ತ, ನಾಗಾವಿ ವೃತ್ತ, ರೈಲ್ವೆ ಸ್ಟೇಷನ್ ಸೇವಾಲಾಲ್ ವೃತ್ತ, ರಾಘವೇಂದ್ರ ಹೋಟೆಲ್, ಕೆನರಾ ಬ್ಯಾಂಕ್ ಮಾರ್ಗವಾಗಿ ಕಾಶಿ ಗಲ್ಲಿಯಿಂದ ಬಸ್ ನಿಲ್ದಾಣ ರಸ್ತೆ ಮೂಲಕ ಬಜಾಜ್ ಕಲ್ಯಾಣ ಮಂಟಪಕ್ಕೆ ತಲುಪಿತ್ತು.
ಪಥ ಸಂಚಲನದಲ್ಲಿ ಎರಡು ಸಾವಿರಕ್ಕೂ ಅಧಿಕ ಯುವಕ-ಯುವತಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ತ್ರಿವರ್ಣ ಧ್ವಜ, ಕನ್ನಡಾಂಬೆಯ ಧ್ವಜ, ಬಾಬಾ ಸಾಹೇಬ್ ಅಂಬೇಡ್ಕರ್ ನೀಲಿ ಧ್ವಜ, ಸಂತ ಸೇವಾಲಾಲ್ ಮಹಾರಾಜರ ಬಿಳಿ ಧ್ವಜ ಹಾಗೂ ಜಗದಂಬಾ ದೇವಿಯ ಕೆಂಪು ಧ್ವಜಗಳನ್ನು ಹಿಡಿದು ಯುವಕರು, ಯುವತಿಯರು, ಬಂಜಾರಾ ಸಮಾಜದ ಮುಖಂಡರು, ತಾಂಡಾ ನಾಯಕರು, ಸರ್ಪಂಚರು ಹಾಗೂ ಮಹಿಳೆಯರು ವಿಶೇಷ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಪಾಲ್ಗೊಂಡಿದ್ದು, ಪಥಸಂಚಲನಕ್ಕೆ ವಿಶೇಷ ಮೆರುಗು ನೀಡಿತು. ದಾರಿಯುದ್ದಕ್ಕೂ ಕರಿ ಬಣ್ಣದ ಟೀಶರ್ಟ್ ಧರಿಸಿ ಶಿಸ್ತಿನಿಂದ ಸಾಗಿದ ಯುವಕ-ಯುವತಿಯರ ಮೇಲೆ ಹೂವಿನ ಸುರಿಮಳೆ ಹರಿಯಿತು.
